ಭಟ್ಕಳದಲ್ಲಿ ಅನ್ಯ ಕೋಮಿನವರಿಂದ ಮುರಿನಕಟ್ಟೆಗೆ ಧಕ್ಕೆ murin katte

ಭಟ್ಕಳದ ಮುರಿನಕಟ್ಟೆ ಬಳಿ ಭಾನುವಾರ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು.
ಭಟ್ಕಳದ ಮುರಿನಕಟ್ಟೆ ಬಳಿ ಭಾನುವಾರ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು.
Published on

ಪ್ರಮುಖ ಮುಖ್ಯಾಂಶಗಳು

  • ಭಟ್ಕಳದಲ್ಲಿ ಉದ್ವಿಗ್ನ ವಾತಾವರಣ
  • ಮೂರು ದಿನ ಕಲಂ 144 ಜಾರಿ
ಭಟ್ಕಳ: ಹೆದ್ದಾರಿ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದ ಹಿಂದೂ ಶ್ರದ್ಧಾ ಕೇಂದ್ರದ ಮುರಿನ ಕಟ್ಟೆಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಭಾನುವಾರ ಬೆಳಗ್ಗೆ ಮರು ನಿರ್ಮಾಣ ಮಾಡಿದ್ದರು. ಇದಕ್ಕೆ ಸಂಬಂಧಿಸಿ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು ಕಟ್ಟೆಯನ್ನು ಭಾಗಶಃ ತೆರವುಗೊಳಿಸಿದ ಘಟನೆ ಭಟ್ಕಳದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿ ತಹಬದಿಗೆ ತರಲು ಜಿಲ್ಲಾಡಳಿತ ಪಟ್ಟಣದಲ್ಲಿ ಮೂರು ದಿನ ಕಲಂ 144 ಜಾರಿಗೊಳಿಸಿದೆ.
ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಬೆಳಗ್ಗೆ ಕಟ್ಟೆ ನಿರ್ಮಿಸಿದ್ದರು. ಈ ವೇಳೆ ಕೆಲ ಮುಸ್ಲಿಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಜೆ. ಮಹೇಶ ನೇತೃತ್ವದಲ್ಲಿ ಸಭೆ ನಡೆಸಿ, ಹೆದ್ದಾರಿ ಅಗಲೀಕರಣ ಮತ್ತು ಅಪಘಾತ ತಡೆ ದೃಷ್ಟಿಯಿಂದ ಎಲ್ಲರೂ ಸಹಕರಿಸುವಂತೆ ಮನವಿ ಮಾಡಲಾಗಿತ್ತು ಎನ್ನಲಾಗಿದೆ.
ಆದರೆ, ರಾತ್ರಿ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮುದಾಯದವರು ಮೂರಿನ ಕಟ್ಟೆ ಸಮೀಪ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್‌ಪಿ ಎಂ. ದೀಪನ್ ಹಾಗೂ ಡಿವೈಎಸ್ಪಿ ಗಿರೀಶ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಮತ್ತು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಉದ್ರಿಕ್ತ ಯುವಕರ ಗುಂಪೊಂದು ಕಬ್ಬಿಣದ ರಾಡ್ ಬಳಸಿ ಕಟ್ಟೆಯನ್ನು  ಧ್ವಂಸಗೊಳಿಸಿರುವುದಾಗಿ ತಿಳಿದುಬಂದಿದೆ.
ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾವಿರಾರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಘಟನೆ ಬಳಿಕ ಭಟ್ಕಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪಟ್ಟಣದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಸೋಮವಾರ ಭಟ್ಕಳ ಬಂದ್‌ಗೆ ಕರೆ ನೀಡುವ ಸಾಧ್ಯತೆ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಟ್ಟೆ  ಒಡೆಯುವ ಚಿತ್ರಗಳು ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net