ಮಳೆಗಾಲದಲ್ಲಿ ಭಟ್ಕಳ ಮುಖ್ಯ ವೃತ್ತ ಜಲಾವೃತ

ಭಟ್ಕಳದ ಸಾಗರ ರಸ್ತೆ ಹಾಗೂ ಮುಖ್ಯ ವೃತ್ತ (ಸರ್ಕಲ್) ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ಜಲಾವೃತ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಅಂಗಡಿಕಾರರ ಪರವಾಗಿ ಕುಮಾರ ನಾಯ್ಕ ಮನವಿ ನೀಡಿದರು.
ಭಟ್ಕಳದ ಸಾಗರ ರಸ್ತೆ ಹಾಗೂ ಮುಖ್ಯ ವೃತ್ತ (ಸರ್ಕಲ್) ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ಜಲಾವೃತ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಎಂದು ಅಂಗಡಿಕಾರರ ಪರವಾಗಿ ಕುಮಾರ ನಾಯ್ಕ ಮನವಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆ ಪರಿಹಾರಕ್ಕಾಗಿ ನಗರಸಭೆ ಪೌರಾಯುಕ್ತರಿಗೆ ಅಂಗಡಿಕಾರರ ಮನವಿ
ಭಟ್ಕಳ: ಪಟ್ಟಣದ ಸಾಗರ ರಸ್ತೆ ಹಾಗೂ ಮುಖ್ಯ ವೃತ್ತ (ಸರ್ಕಲ್) ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ಜಲಾವೃತ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ, ಸ್ಥಳೀಯ ಅಂಗಡಿಕಾರರು ಮತ್ತು ಸಾರ್ವಜನಿಕರು ನಗರಸಭೆ ಪೌರಾಯುಕ್ತ ಬಾಬಾ ಸಾಹೇಬ್ ಮಾನೆ ಅವರಿಗೆ ಮನವಿ ಸಲ್ಲಿಸಿದರು.
ಸಾಗರ ರಸ್ತೆ ಮತ್ತು ಸರ್ಕಲ್ ಭಾಗದಲ್ಲಿ ಹಲವು ವರ್ಷಗಳಿಂದ ವಾಣಿಜ್ಯ ಮಳಿಗೆಗಳನ್ನು ನಡೆಸುತ್ತಿರುವ ವ್ಯಾಪಾರಿಗಳು, ಮಳೆಗಾಲದಲ್ಲಿ ಎಲ್ಲ ದಿಕ್ಕುಗಳಿಂದಲೂ ನೀರು ಒಂದೇ ವೇಳೆ ಹರಿದು ಬಂದು ಮುಖ್ಯ ವೃತ್ತದಲ್ಲಿ ಜಮಾಯಿಸುವುದರಿಂದ, ಸ್ವಲ್ಪ ಮಳೆಯಾದರೂ ಪ್ರದೇಶ ಸಂಪೂರ್ಣ ಜಲಾವೃತವಾಗುತ್ತಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಹಾಗೂ ಅಂಗಡಿಗಳ ಮುಂದೆ ವ್ಯಾಪಾರ ಮಾಡುವವರಿಗೆ ಪ್ರತಿವರ್ಷವೂ ತೀವ್ರ ತೊಂದರೆ ಉಂಟಾಗುತ್ತಿದೆ. ಇದೇ ರಸ್ತೆಗೆ ಸಂಪರ್ಕ ಹೊಂದಿರುವ ಬಂದರು ರಸ್ತೆಯಲ್ಲಿಯೂ ಅನೇಕ ಶಾಲೆ-ಕಾಲೇಜ್‌ಗಳು ಇರುವುದರಿಂದ, ವಿದ್ಯಾರ್ಥಿಗಳು ಸಹ ಈ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಳೆಯ ಗಟಾರ ಹಾಗೂ ಪೈಪ್‌ಲೈನ್ ವ್ಯವಸ್ಥೆಯಲ್ಲಿ ಮಣ್ಣು ಶೇಖರಣೆಯಾಗಿರುವುದರಿಂದ ನೀರಿನ ಹರಿವು ಕುಂಠಿತಗೊಂಡಿರುವುದೇ ಸಮಸ್ಯೆಯ ಪ್ರಮುಖ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಅಡ್ಡ ಚರಂಡಿ (ಸಿ.ಡಿ.) ಕಾಮಗಾರಿ ಮಾಡಲಾಗಿದ್ದು, ಇನ್ನೊಂದು ಬದಿಯಲ್ಲಿ ಕಾಮಗಾರಿ ನಡೆದಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತು ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಹೀಗಾಗಿ ಮಳೆಗಾಲ ಆರಂಭವಾಗುವ ಮುನ್ನವೇ ಇನ್ನೊಂದು ಬದಿಯಲ್ಲಿಯೂ ಅಡ್ಡ ಚರಂಡಿ ನಿರ್ಮಿಸಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಕುಮಾರ ನಾಯ್ಕ, ವಿಶು ಮಹಾಲೆ, ಮಾದೇವ ಮೋಗೇರ, ಮೊಹಿದ್ದಿನ್, ತಿಮ್ಮಪ್ಪ ನಾಯ್ಕ, ಅಖಿಲ್ ನಾಯ್ಕ, ಶಂಕರ ನಾಯ್ಕ, ಗಜು ನಾಯ್ಕ ಸೇರಿದಂತೆ ಹತ್ತಕ್ಕೂ ಹೆಚ್ಚು ಅಂಗಡಿಕಾರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net