ಭವಿಷ್ಯದ ತಂತ್ರಜ್ಞಾನಕ್ಕೆ ಮೂಲ ವಿಜ್ಞಾನ (Basic science) ತಳಹದಿ
ಗೋಕರ್ಣದ ಸಾರ್ವಭೌಮ ಗುರುಕುಲಂನಲ್ಲಿ ಶನಿವಾರ ಆಯೋಜಿಸಿದ್ದ ವಿನೂತನ ವಿಜ್ಞಾನ ಕಾರ್ಯಾಗಾರವನ್ನು ಹಿರಿಯ ಶಿಕ್ಷಣ ತಜ್ಞ ಅ.ಪು. ನಾರಾಯಣಪ್ಪ, ಗಣ್ಯರು ಉದ್ಘಾಟಿಸಿದರು. ಪ್ರೊ.ಎಂ. ನಾರಾಯಣ ಭಟ್ಟ, ಡಾ.ಅಶೋಕ ರೂಪ್ನೆರ್, ಡಾ.ಜಿ.ಎಲ್. ಹೆಗಡೆ, ಮಂಜುನಾಥ ಸುವರ್ಣಗದ್ದೆ ಇತರರಿದ್ದರು.
ಐಐಎಸ್‌ಇಆರ್ ತಾಂತ್ರಿಕ ಸಲಹೆಗಾರ ಡಾ.ಅಶೋಕ ರೂಪ್ನೆರ್ ಅಭಿಮತ
ಸಾರ್ವಭೌಮ ಗುರುಕುಲಂನಲ್ಲಿ ಕಾರ್ಯಾಗಾರ ಆಯೋಜನೆ
ವಿಜ್ಞಾನದ ಮೂಲ ಗುಟ್ಟು ಮನನ ಮಾಡಿಸಿ
ಗೋಕರ್ಣ: ಭವಿಷ್ಯದ ತಂತ್ರಜ್ಞಾನಕ್ಕೆ (Basic science) ಮೂಲಭೂತ ವಿಜ್ಞಾನವೇ ತಳಹದಿಯಾಗಿದೆ. ಕಾರಣ ವಿಜ್ಞಾನದ ಮೂಲವನ್ನು ಸರಳವಾಗಿ ಅರಿಯುವುದರಿಂದ ಮಾತ್ರ ಮೂಲಭೂತ ತಂತ್ರಶಾಸ್ತ್ರವನ್ನು ಸುಲಭವಾಗಿ ತಿಳಿಯಬಹುದಾಗಿದೆ ಎಂದು ಪುಣೆಯ ಭಾರತೀಯ ವಿಜ್ಞಾನ ಹಾಗೂ ಅನುಸಂಧಾನ ಸಂಸ್ಥೆ (ಐಐಎಸ್‌ಇಆರ್) ತಾಂತ್ರಿಕ ಸಲಹೆಗಾರ ಡಾ.ಅಶೋಕ ರೂಪ್ನೆರ್ ಹೇಳಿದರು.
ಇಲ್ಲಿನ ಸಾರ್ವಭೌಮ ಗುರುಕುಲಂನಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ವಿನೂತನ ವಿಜ್ಞಾನ ಕಾರ್ಯಾಗಾರದಲ್ಲಿ ಸರಳ ಪ್ರಯೋಗಗಳ ಪ್ರದರ್ಶನದಲ್ಲಿ ಅವರು ಉಪನ್ಯಾಸ ನೀಡಿದರು. ವಿಜ್ಞಾನದ ಈ ಮೂಲ ಗುಟ್ಟನ್ನು ಮನನ ಮಾಡಿಕೊಂಡಲ್ಲಿ ತಂತ್ರಜ್ಞಾನದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದರು.
ಅಶೋಕಾ ಲೋಕದ ಶ್ರೀ ಸಂಯೋಜಕ ಮಂಜುನಾಥ ಸುವರ್ಣಗದ್ದೆ ಮಾತನಾಡಿ, ಭಾರತೀಯ ಪರಂಪರೆಯ ಸಂಶೋಧನೆಯ ಗುರಿ ಹೊಂದಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈಗಾಗಲೇ ಯೋಜನೆಗಳನ್ನು ಕಾರ್ಯಾರಂಭಗೊಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಭಾಷಾ ಶಾಸ್ತ್ರಜ್ಞ ಡಾ.ಜಿ.ಎಲ್. ಹೆಗಡೆ ಹೇಗೆ ಬಾಹ್ಯದಲ್ಲಿ ಇರುವುದೆಲ್ಲ ನಮ್ಮ ಒಳಗಿದೆಯೋ ಹಾಗೆ ವಿಜ್ಞಾನದಲ್ಲಿ ಇರುವುದು ಕೂಡ ನಮ್ಮೊಳಗಿದೆ. ಅದನ್ನು ಅರಿಯುವ ಪ್ರಯತ್ನ ಬೇಕು ಎಂದರು.
ಕಾರ್ಯಾಗಾರದಲ್ಲಿ ಡಾ. ಅಶೋಕ ಅವರು ನ್ಯೂಟನ್‌ನ ಮೂರನೇ ನಿಯಮ, ಶಬ್ಧ ತರಂಗಗಳು, ಬೆಳಕಿನ ನೇರ ಚಲನೆ, ಗುರುತ್ವಾಕರ್ಷಣೆಯ ಕೇಂದ್ರ ಇತ್ಯಾದಿ ವಿವಿಧ ಪ್ರಕಾರದ ಮೂಲ ವೈಜ್ಞಾನಿಕ ಸಿದ್ಧಾಂತಗಳನ್ನು ಅತ್ಯಂತ ಸರಳ ಮತ್ತು ಸುಲಭ ಪ್ರಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗಿಸಿದರು.
ಕಾರ್ಯಾಗಾರದಲ್ಲಿ ಗುರುಕುಲಂ ವಿಜ್ಞಾನ ವಿಭಾಗ ಮುಖ್ಯಸ್ಥ ನಿವೃತ್ತ ಉಪನ್ಯಾಸಕ ಮರುವಳ ನಾರಾಯಣ ಭಟ್ಟ, ಹಿರಿಯ ಶಿಕ್ಷಣ ತಜ್ಞ ಅ.ಪು. ನಾರಾಯಣಪ್ಪ, ಮುಖ್ಯ ಶಿಕ್ಷಕಿ ಸೌಭಾಗ್ಯಾ ಭಟ್ಟ, ಇತರರು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಶಶಿಕಲಾ ಕೂರ್ಸೆ, ಸೌಭಾಗ್ಯಾ ಭಟ್ಟ, ಇಶಾನ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.