ಬೆಂಗಳೂರು-ಮಡಗಾಂವ ವಂದೇ ಭಾರತ ರೈಲು ಮಂಗಳೂರಿಗ್‌ ಹೋಗಲ್ಲ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ: ಪ್ರಸ್ತಾವಿತ ಬೆಂಗಳೂರು - ಮಡಗಾಂವ್ ವಂದೇ ಭಾರತ್ ರೈಲು ಮಂಗಳೂರು ತಲುಪದೇ ಕಾರವಾರದತ್ತ ಬರಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ರೈಲು ಬೆಂಗಳೂರಿನಿAದ ಹೊರಟು ಪಡೀಲ್ ಬೈಪಾಸ್ ಮೂಲಕ ಉಡುಪಿ, ಕಾರವಾರವನ್ನು ತಲುಪಿ, ಅಲ್ಲಿಂದ ಮಡಗಾಂವ್‌ಗೆ ಸಂಚರಿಸಲಿದೆ. ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ಹೇಳಿಕೆ ನೀಡಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.
ಮಂಗಳೂರು ಕರಾವಳಿಯ ಆರಂಭಿಕ ನಗರವಾಗಿದೆ. ಆದರೆ, ಶಿಕ್ಷಣ ಕಾಶಿ ಉಡುಪಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕುಂದಾಪುರ, ಪವಿತ್ರ ಪ್ರವಾಸಿ ತಾಣಗಳಾದ ಮುರುಡೇಶ್ವರ, ಗೋಕರ್ಣ ಹಾಗೂ ರಕ್ಷಣಾ ನೆಲೆಯಾಗಿರುವ ಕಾರವಾರಕ್ಕೆ ಬೆಂಗಳೂರಿನಿಂದ ವಂದೇ ಭಾರತ್ ರೈಲಿನ ನೇರ ಸಂಪರ್ಕ ಸಿಕ್ಕಾಗ ಮಾತ್ರ ಸಮಗ್ರ ಕರಾವಳಿ ಭಾಗಕ್ಕೆ ನಿಜವಾದ ಅನುಕೂಲವಾಗಲಿದೆ. ಇಡೀ ಕರಾವಳಿ ತೀರವನ್ನು ರಾಜಧಾನಿ ಬೆಂಗಳೂರಿನೊAದಿಗೆ ವಂದೇ ಭಾರತ್ ಮೂಲಕ ಜೋಡಿಸುವುದೇ ಭಾರತ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಈ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸಿ ಖಚಿತ ಭರವಸೆ ಪಡೆಯಲಾಗಿದೆ. ಅಲ್ಲದೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೂ ಈ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ಘಾಟ್ ಪ್ರದೇಶದಲ್ಲಿ ಕರಾವಳಿ ಭಾಗದ ರೈಲುಗಳು ತೀರಾ ನಿಧಾನಗತಿಯಲ್ಲಿ ಚಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಂತ ವೇಗದ ಹಾಗೂ ನೇರ ಮಾರ್ಗದಲ್ಲೇ ಬೆಂಗಳೂರು-ಕರಾವಳಿ ರೈಲುಗಳು ಸಂಚರಿಸಬೇಕಾಗಿದೆ. ಮಂಗಳೂರು ಸೆಂಟ್ರಲ್ ಅಥವಾ ಜಂಕ್ಷನ್ ನಿಲ್ದಾಣಗಳಿಗೆ ಅನಗತ್ಯವಾಗಿ ಸುತ್ತಿ ಬಳಸಿ ಹೋಗುವುದನ್ನು ಮತ್ತು ಅಲ್ಲಿ ಇಂಜಿನ್ ಬದಲಾಯಿಸುವ ಸಮಯದ ವ್ಯಯವನ್ನು ತಪ್ಪಿಸಲು, 'ಪಡೀಲ್ ಬೈಪಾಸ್' ನೇರ ಮಾರ್ಗವನ್ನು ಅಭಿವೃದ್ಧಿಪಡಿಸುವಂತೆ ರೈಲ್ವೆ ಇಲಾಖೆಗೆ ಮಹತ್ವದ ಸಲಹೆ ನೀಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net