ಸಮುದ್ರವೀಗ ಹೆರಿಗೆ ಕೋಣೆ!! ಇಲ್ಲಿದೆ ಕುತೂಹಲದ ಮಾಹಿತಿ

ಕಾರವಾರದ ಮೀನುಗಾರಿಕೆ ಬೋಟ್‌ಗಳು
ಕಾರವಾರದ ಮೀನುಗಾರಿಕೆ ಬೋಟ್‌ಗಳು
Published on

ಪ್ರಮುಖ ಮುಖ್ಯಾಂಶಗಳು

  • ಮೀನುಗಾರಿಕೆಗೆ 61 ದಿನ ನಿಷೇಧ
  • ಉತ್ತರ ಕನ್ನಡ 8 ಬಂದರುಗಳ 550 ಕ್ಕೂ ಹೆಚ್ಚು ಬೋಟ್‌ಗಳು ದಡಕ್ಕೆ
ಕಾರವಾರ: ಸಮುದ್ರದಲ್ಲೀಗ ಸಂತಾನೋತ್ಪತ್ತಿಯ ಕಾಲ. ಹಾಗಾಗಿ ಸಮುದ್ರ ಹೆರಿಗೆ ಕೋಣೆಯಾಗಲಿದೆ. ಜೂನ್ 1 ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನಗಾರಿಕೆಗೆ ಅಧಿಕೃತವಾಗಿ ತಡೆ ಬೀಳಲಿದೆ.
ಮಳೆಗಾಲದ ಕಾರಣ ಬೇರೆ ಬೇರೆ ನದಿಗಳಿಂದ ಖನಿಜಯುಕ್ತ ನೀರು ಸಮುದ್ರಕ್ಕೆ ಬರುವುದರಿಂದ ಜಲಚರಗಳಿಗೆ ಸಾಕಷ್ಟು ಆಹಾರ ಸಿಗುತ್ತದೆ. ಇದರಿಂದ ಅವು ಮೊಟ್ಟೆಗಳನ್ನು ನೀರಿನಲ್ಲಿ ಬಿಡುತ್ತವೆ. ಮೊಟ್ಟೆಗಳು ಮರಿಯಾಗಿ ಮಾರ್ಪಡುವ ಕಾಲದಲ್ಲಿ ಮೀನುಗಾರಿಕೆ ಮಾಡುವುದರಿಂದ ಅವುಗಳ ಸಂಖ್ಯೆ ಇಳಿಕೆಯಾಗುತ್ತವೆ ಎಂಬ ಕಾರಣದಿಂದ ಬೃಹತ್‌ ಪ್ರಮಾಣದ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಮೀನುಗಾರಿಕೆ ಇಲಾಖೆ ಈ ಆದೇಶ ಹೊರಡಿಸುತ್ತದೆ.
ಈ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ 8 ಮೀನುಗಾರಿಕೆ ಬಂದರುಗಳಿಂದ ಸುಮಾರು 550 ದೋಣಿಗಳು ಲಂಗರು ಹಾಕಲಿವೆ. ಆದರೆ, ಸಮುದ್ರ ಪ್ರಕ್ಷುಬ್ದವಾಗಿರುವ ಕಾರಣ ಈಗಾಗಲೇ ಸಾಕಷ್ಟು ಬೋಟ್‌ಗಳು ದಡ ಸೇರಿವೆ. ಕಾರ್ಮಿಕರು ಊರಿನತ್ತ ತೆರಳಿದ್ದಾರೆ. ಹಾಗಾಗಿ ಒಂದು ವಾರಕ್ಕೂ ಮುಂಚೆಯೇ ಮೀನುಗಾರಿಗೆ ಭಾಗಶಃ ಬಂದ್ ಆಗಿದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಇದು ಸುಗ್ಗಿ ಕಾಲವಾಗಿದ್ದು, 1200 ಕ್ಕೂ ಅಽಕ ಔಟ್ ಬೋರ್ಡ್ ಇಂಜಿನ್ ಹಾಗೂ ಹುಟ್ಟು ಹಾಕಿ ನಡೆಸುವ ನಾಡ ದೋಣಿಗಳು ಹಿಡಿಯುವ ಮೀನಿಗೆ ಬೆಲೆ ಬರಲಿದೆ.
ಸಮುದ್ರದಲ್ಲಿ ಈಗ ಸಂತಾನೋತ್ಪತ್ತಿಯ ಕಾಲವಿದು. ಮೀನುಗಳು ಮೊಟ್ಟೆ ಇಟ್ಟು ಮರಿಗಳಾಗುವ ಅವಽ ಇದಾಗಿದ್ದರಿಂದ ಅವುಗಳ ಬೆಳವಣಿಗೆಗೆ ಅವಕಾಶ ನೀಡುವ ಉದ್ದೇಶದಿಂದ ಜೂನ್ ಹಾಗೂ ಜುಲೈ ತಿಂಗಳಲ್ಲಿ 10 ಎಚ್.ಪಿ.ಗಿಂತ ಹೆಚ್ಚು ಸಾಮರ್ಥ್ಯದ ಬೋಟ್‌ಗಳ ಓಡಾಟಕ್ಕೆ ಕರ್ನಾಟಕದಲ್ಲಿ ನಿಷೇಧ ಹೇರಲಾಗಿದೆ. ಪಕ್ಕದ ಗೋವಾ, ಮಹಾರಾಷ್ಟ್ರದಲ್ಲಿ ಇದೇ ಅವಧಿಯಲ್ಲಿ ನಿಷೇಧವಿದೆ. ಆದರೆ, ಕೇರಳದಲ್ಲಿ ನಿಷೇಧದ ಅವಽಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.
ಉತ್ತಮ ಇಳುವರಿ:
2025 ಆಗಸ್ಟ್ನಿಂದ ಈ ವರ್ಷ ಏಪ್ರಿಲ್‌ವರೆಗೆ ಜಿಲ್ಲೆಯಲ್ಲಿ ಸಮುದ್ರದಿಂದ ಸುಮಾರು 1,14682 ಮೆಟ್ರಿಕ್ ಟನ್ ಮೀನು ಬೇಟೆಯಾಗಿದೆ. ಹಿಂದಿನ ವರ್ಷಕ್ಕಿಂತ ಸುಮಾರು 6,600 ಮೆಟ್ರಿಕ್ ಟನ್ ಇಳುವರಿ ಹೆಚ್ಚಿದೆ. 2024 ರ ಆಗಸ್ಟ್ನಿಂದ ಏಪ್ರಿಲ್‌ವರೆಗೆ 1,08,022 ಮೆಟ್ರಿಕ್ ಟನ್ ಮೀನು ಬೇಟೆಯಾಗಿತ್ತು. ಹವಾಮಾನದ ಆಧಾರದ ಮೇಲೆ ಮೀನುಗಾರಿಕೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಬಿರುಗಾಳಿ ಬಂದರೆ ದೋಣಿಗಳು ದಡ ಸೇರಬೇಕಾಗುತ್ತವೆ ಎನ್ನುತ್ತಾರೆ ಮೀನುಗಾರರು.

ಜಲ ಸಾಹಸ ಕ್ರೀಡೆಗಳು ನಿಷೇಧ

ಜಲ ಸಾಹಸ ಕ್ರೀಡೆಗಳಿಗೆ ಜೂನ್ 1 ರಿಂದ ಆಗಸ್ಟ್ 31 ರವರೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಅವರು ಈ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಬೋಟಿಂಗ್, ಸಾಕಸ ಕ್ರೀಡೆಗಳು, ಸ್ಕೂಬಾ ಡೈವಿಂಗ್, ನದಿಯಲ್ಲಿ ನಡೆಯುವ ರ‍್ಯಾಫ್ಟಿಂಗ್ ಚಟುವಟಿಕೆಗಳನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ. ಅವಗಢಗಳು ಸಂಭವಿಸುವುದನ್ನು ತಪ್ಪಿಸಲು ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. ಆದರೆ, ಮೀನುಗಾರಿಕೆ ನಿಷೇಧಕ್ಕೆ ಬೇರೆ ಉದ್ದೇಶವೇ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net