ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ನೀಡುವ ಕಾಯ್ದೆ ಜಾರಿಗೆ ತಂದ ಬಾಬು ಜಗಜೀವನರಾಮ್‌

ಬಾಬು ಜಗಜೀವನರಾಂ ಜಯಂತಿ
ಬಾಬು ಜಗಜೀವನರಾಂ ಜಯಂತಿ
Published on
ಕಾರವಾರ: ಡಾ.ಬಾಬು ಜಗಜೀವನ ರಾಂ ಅವರು , ಸಮಾನತೆಯ ಹರಿಕಾರರಾಗಿ, ದೇಶದ ಎಲ್ಲ ವರ್ಗದ ಹಾಗೂ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ನೀಡುವ ಕಾಯ್ದೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದರು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಶ್ ಶಶಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿ ಸ್ವತಃ ಅಸ್ಪ್ರಶ್ಯತೆಯನ್ನು ಅನುಭವಿಸಿ, ಅದರ ವಿರುದ್ದ ಹೋರಾಟ ಆರಂಭಿಸಿ, ಶಿಕ್ಷಣದ ಮೂಲಕ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಜಗಜೀವನ ರಾಂ ಅವರು. ಅವರು ತಮ್ಮ ಪ್ರತಿ ಕಾರ್ಯದಲ್ಲೂ ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಅವರ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ಅನುಸರಿಸಬೇಕು.
ಸಮಾನತೆ ಜಾರಿಗೆ ತರುವುದು ಸಮಾಜ ಕಲ್ಯಾಣ ಇಲಾಖೆ ಅಥವಾ ಯಾವುದೋ ಒಂದು ಇಲಾಖೆಯ ಕಾರ್ಯವಲ್ಲ. ಸಮಾಜದ ಪ್ರತಿ ವ್ಯಕ್ತಿಯಿಂದಲೂ ಈ ಕಾರ್ಯವಾಗಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಅಲ್ಲಾಭಕ್ಷ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಅವರು , ಕಾರ್ಮಿಕರ ಹಿತ ರಕ್ಷಣೆಗಾಗಿ ಕನಿಷ್ಠ ವೇತನ ಕಾಯ್ದೆ, ನ್ಯಾಷನಲ್ ಲೇಬರ್ ಕಮಿಷನ್ ಸ್ಥಾಪನೆ, ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದಾದ್ಯಂತ ಕೃಷಿ ವಿಜ್ಞಾನ ಕೇಂದ್ರಗಳ ಸ್ಥಾಪನೆ, ರೈಲ್ವೆ ಮಜ್ದೂರು ಯೂನಿಯನ್ ಗೆ ಮಾನ್ಯತೆ ಹೀಗೆ ದೇಶದಲ್ಲಿ ಬದಲಾವಣೆ ತರಲು ಅವರು ಮಾಡಿದ ಕಾರ್ಯಗಳು ಒಂದೆರಡಲ್ಲ ಎಂದು ವಿವರಿಸಿದರು.
ಉಪನ್ಯಾಸ ನೀಡಿದ ಪರಿಶಿಷ್ಟ ಜಾತಿ,ಪರಿಶಿಷ್ಟ .ವರ್ಗಗಳ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜಿ.ಡಿ.ಮನೋಜೆ, ಶಕ್ತಿ ಮತ್ತು ಹೋರಾಟಕ್ಕೆ ಮತ್ತೊಂದು ಹೆಸರು ಡಾ.ಬಾಬು ಜಗಜೀವನ ರಾಂ. ಕೇಂದ್ರ ಸಚಿವರಾಗಿ ತಾವು ಕರ್ತವ್ಯ ನಿರ್ವಹಿಸಿದ ಎಲ್ಲ ಇಲಾಖೆಗಳಲ್ಲಿ ಹಲವು ಕಾಯಿದೆಗಳನ್ನು ಜಾರಿಗೆ ತಂದಿದ್ದರು. ಸಮಾಜ ಪರಿವರ್ತನೆಯ ತುಡಿತ ಹೊಂದಿದ್ದ ಅವರು ದೇಶದ ಪ್ರಗತಿಯೇ ಪ್ರತಿಯೊಬ್ಬರ ಪ್ರಗತಿ ಎಂದು ನಂಬಿದ್ದರು ಎಂದರು.
ಎಸ್‌ಪಿ ದೀಪನ್ ಎಂ.ಎನ್.ಎಡಿಸಿ ಸಾಜಿದ್ ಮುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಽಕಾರಿ ವೈ.ಕೆ.ಉಮೇಶ್, ದಲಿತ ಸಂಘಟನೆಗಳು ಮುಖಂಡರಾದ ದೀಪಕ್ ಕುಡಾಳಕರ, ನಾಗರಾಜ ತಳವಾರ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ನಳಿನಿ ಪಟಗಾರ್ ಸ್ವಾಗತಿಸಿದರು. ಪತ್ರಾಂಕಿತ ವ್ಯವಸ್ಥಾಪಕ ನಾಗರಾಜ ನಾಯಕ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net