ಸ್ವಯಂ ಚಾಲಿತ ಮ್ಯುಟೇಶನ್‌ ಎಂಟ್ರಿ ವ್ಯವಸ್ಥೆ ಜಾರಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕಾರವಾರ: ಜಿಲ್ಲೆಯಲ್ಲಿ ಸ್ವಯಂ ಚಾಲಿತ ಮ್ಯುಟೇಶನ್ ದಾಖಲೆ ತಂತ್ರಾಂಶ ಜಾರಿಯಾಗಿದ್ದು, 22 ದಿನಗಳಲ್ಲಿ ಸಾವಿರಕ್ಕೂ ಕ್ಕೂ ಅಧಿಕ ಮ್ಯುಟೇಶನ್‌ಗಳು ಈ ವ್ಯವಸ್ಥೆಯಡಿ ನೋಂದಣಿಯಾಗಿವೆ.
ಭೂ ದಾಖಲೆಗಳಲ್ಲಿ ಪಾರದರ್ಶಕ, ಶೀಘ್ರ ಕಾರ್ಯ ನಿರ್ವಹಣೆಗಾಗಿ ಭೂಮಿ ಮತ್ತು ಕಂದಾಯ ನ್ಯಾಯಾಲಯಗಳ ಪ್ರಕರಣ ಡಿಜಿಟಲ್ ನಿರ್ವಹಣಾ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದರ ಭಾಗವಾಗಿ ಸ್ವಯಂ ಚಾಲಿತ ಮ್ಯುಟೇಶನ್ ಎಂಟ್ರಿ ವ್ಯವಸ್ಥೆಯು ಜಿಲ್ಲೆಯಲ್ಲಿ ಫೆಬ್ರವರಿ 24 ರಂದು ಜಾರಿಗೆ ಬಂದಿದೆ.
ಇದುವರೆಗೆ ಮ್ಯುಟೇಶನ್ ಎಂಟ್ರಿಗೆ 7 ದಿನಗಳ ಹಾಗೂ 15 ದಿನಗಳ ನೋಟಿಸ್ ಅವಽಯು ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡಬೇಕಿತ್ತು. ಇದರಿಂದ ಭೂ ಮಾಲೀಕರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು.
ಉತ್ತರ ಕನ್ನಡ ಜಿಲ್ಲೆಯಲ್ಲಿ 1,77,450 ಮ್ಯುಟೇಶನ್ ಗಳನ್ನು ತಂತ್ರಾಶದಲ್ಲಿ ದಾಖಲಿಸಲಾಗಿದೆ. ಸ್ವಯಂ ಚಾಲಿತ ವ್ಯವಸ್ಥೆ ಜಾರಿಯಾದ ನಂತರ 7 ಕೆಲಸದ ದಿನಗಳಲ್ಲಿ ದಾಖಲಾದ 465 ಮತ್ತು 15 ಕೆಲಸದ ದಿನಗಳಲ್ಲಿ ದಾಖಲಾದ 547 ಪ್ರಕರಣಗಳು ಸ್ವಯಂಚಾಲಿತವಾಗಿ ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
ಆಕ್ಷೇಪಣೆಗಳಿದ್ದರೆ ತಹಸೀಲ್ದಾರ್ ಲಾಗಿನ್‌ಗೆ:
ಕಂದಾಯ ನಿರೀಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಲಾಗಿನ್ ನೀಡಲಾಗಿದ್ದು, ಸಾರ್ವಜನಿಕರು ಯಾವುದೇ ಸ್ಥಳದಿಂದ ನೋಟಿಸ್ ಅವಽಯೊಳಗೆ ಆಕ್ಷೇಪಣೆಯನ್ನು ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.ಅಲ್ಲದೇ, ಸಂಬAಧಪಟ್ಟ ಸರ್ಕಾರಿ ಅಽಕಾರಿಯು ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಕೆಯಾದಲ್ಲಿ ಮುಟೇಶನ್‌ನ್ನು ಪೂರ್ಣಗೊಳಿಸದೆ ಪ್ರಕರಣವು ತಹಸೀಲ್ದಾರರ ನ್ಯಾಯಾಲಯಕ್ಕೆ ವರ್ಗಾವಣೆಯಾಗುತ್ತದೆ.
ಹೇಗೆ ಸ್ವಯಂ ಚಾಲಿತ ವ್ಯವಸ್ಥೆ ..?
ನೋಂದಣಿ ಇಲಾಖೆಯ ತಂತ್ರಾಂಶಕ್ಕೆ ಕಂದಾಯ ಇಲಾಖೆಯ ಭೂಮಿ ತಂತ್ರಾಂಶದ ಲಿಂಕ್ ನೀಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ದಸ್ತಾವೇಜು ನೋಂದಣಿಯಾದ ತಕ್ಷಣ, ಭೂಮಿ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಮ್ಯುಟೇಶನ್ ಪ್ರಕ್ರಿಯೆ ಆರಂಭವಾಗಲಿದೆ. ಪೌತಿ ಮ್ಯುಟೇಶನ್‌ಗಳ 7 ಅಥವಾ 15 ದಿನಗಳ ನೋಟಿಸ್ ಅವಧಿ ಮುಕ್ತಾಯವಾದ ಬಳಿಕ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿಗಳು ಸರ್ವರ್ ಸಹಿಯ ಮೂಲಕ ಮ್ಯುಟೇಶನ್ ಎಂಟ್ರಿಯಾಗುತ್ತವೆ. ನಂತರ ಸಂಬಂಧಪಟ್ಟವರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ತನ್ನಿಂದ ತಾನೇ ಹೋಗುತ್ತದೆ.
ಹೊಸ ವ್ಯವಸ್ಥೆಯ ಪ್ರಯೋಜನಗಳು
  • *ಸಾರ್ವಜನಿಕರು ಕಂದಾಯ ಅಕಾರಿಗಳ ಕಚೇರಿಗೆ ಅಲೆಯುವುದು ತಪ್ಪುತ್ತದೆ
  • *ಮ್ಯುಟೇಶನ್ ಪ್ರಕ್ರಿಯೆಯಲ್ಲಿ ಅನಗತ್ಯವಾದ ವಿಳಂಬ ಕಡಿಮೆಯಾಗುತ್ತದೆ.
  • *ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ.
  • *ಆಸ್ತಿ ಖರೀದಿದಾರರು ಮತ್ತು ರೈತರಿಗೆ ಆರ್‌ಟಿಸಿ ಅಥವಾ ಆಸ್ತಿ ದಾಖಲೆಗಳಲ್ಲಿನ ಹೆಸರನ್ನು ತ್ವರಿತವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿದೆ.
  • *ಬ್ಯಾಂಕ್ ಸಾಲ, ಬೆಳೆ ವಿಮೆ ಮತ್ತು ಸರ್ಕಾರದ ಸಬ್ಸಿಡಿಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ.
"

ಸ್ವಯಂ ಚಾಲಿತ ಮ್ಯುಟೇಶನ್ ಎಂಟ್ರಿ ತಂತ್ರಾಂಶದ ಪ್ರಕ್ರಿಯೆಯು ಡಿಜಿಟಲ್ ಪಾರದರ್ಶಕತೆಯನ್ನು ಹೊಂದಿದೆ. ಭೂ ಮಾಲೀಕರು ತಮ್ಮ ಪಹಣಿಗೆ ಆಧಾರ ಜೋಡಣೆ ಮಾಡಿಕೊಂಡಿದ್ದರೆ ಪ್ರತಿ ಹಂತದ ಮಾಹಿತಿಯು ಅರ್ಜಿದಾರರ ಮೊಬೈಲ್‌ಗೆ ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ತಲುಪುತ್ತದೆ. ರೈತರು ಅಥವಾ ಆಸ್ತಿ ಮಾಲೀಕರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ಇದ್ದಲ್ಲಿಯೇ ಆನ್‌ಲೈನ್ ಮೂಲಕ ಪಹಣಿ ಅಥವಾ ಖಾತಾ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಕೂಡಾ ಕಲ್ಪಿಸಲಾಗಿದೆ. ಅಲ್ಲದೇ ಅಮಾಯಕರು ಶೋಷಣೆಗೆ ಒಳಗಾಗುವುದು ತಪ್ಪುತ್ತದೆ.

ಕೆ.ಲಕ್ಷ್ಮೀಪ್ರಿಯಾಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net