ಸೊಪ್ಪಿನ ಬೆಟ್ಟ ಸಮಸ್ಯೆ ಪರಿಹಾರಕ್ಕೆ ಯತ್ನ Soppina Betta

ಸೊಪ್ಪಿನ ಬೆಟ್ಟ (Soppina Betta)
ಸೊಪ್ಪಿನ ಬೆಟ್ಟ (Soppina Betta)
Published on
ಶಿರಸಿ: ಹಲವಾರು ವರ್ಷಗಳಿಂದ ಶಿರಸಿ ಉಪ ವಿಭಾಗದ ರೈತರನ್ನು ಕಾಡುತ್ತಿರುವ (Soppina Betta)ಸೊಪ್ಪಿನ ಬೆಟ್ಟ ಬ ಖರಾಬ್ ಸಮಸ್ಯೆ ಬಗೆಹರಿಸಲು ರೈತರಿಂದ ಸಹಿ ಸಂಗ್ರಹಿಸಲು ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ನಿರ್ಧರಿಸಿದೆ.
ಶಾಸಕ ಭೀಮಣ್ಣ ನಾಯ್ಕ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಲ್ಲ ರೈತರು ಸಹಿ ಹಾಕಿರುವ ಮನವಿಯನ್ನು ನೀಡಿ ಸಮಸ್ಯೆ ಬಗೆಹರಿಸಲು ಯತ್ನಿಸಲಿದೆ.
ನಗರದಲ್ಲಿ ಈ ಅಭಿಯಾನದ ಕುರಿತು ಗುರುವಾರ ಮಾಹಿತಿ ನೀಡಿದ ಟ್ರಸ್ಟ್ ಪ್ರಮುಖರಾದ ರಾಮಕೃಷ್ಣ ಹೆಗಡೆ ಕಡವೆ ಹಾಗೂ ಎಸ್. ಕೆ. ಭಾಗ್ವತ್, 2012ರವರೆಗೂ ಸೊಪ್ಪಿನ ಬೆಟ್ಟವನ್ನು ಅ ಖರಾಬ್ ಎಂದಾಗಲೀ, ಬ ಖರಾಬ್ ಎಂದಾಗಲೀ ಪರಿಗಣಿಸಿರಲಿಲ್ಲ.
ಆದರೆ, ಒಮ್ಮೆಲೇ ಶಿರಸಿ ಉಪ ವಿಭಾಗದ ಎಲ್ಲ ಸೊಪ್ಪಿನ ಬೆಟ್ಟಗಳೂ ಬ ಖರಾಬ್ ವ್ಯಾಪ್ತಿಗೆ ಸೇರಿಸಲಾಗಿದೆ. ಬ ಖರಾಬ್ ಎಂದರೆ ಅದು ಸಾರ್ವಜನಿಕರ ಬಳಕೆಯ ಜಾಗ ಎಂದು ಉಲ್ಲೇಖವಾಗುತ್ತದೆ.
ಆದರೆ, ಬ್ರಿಟಿಷ್ ಸರ್ಕಾರದ ಅವಧಿಯಲ್ಲೇ 1923ರಲ್ಲಿ ರೈತರಿಗೆ 1 ಎಕರೆ ಕೃಷಿ ಭೂಮಿಗೆ 9 ಎಕರೆಯಂತೆ ಸೊಪ್ಪಿನ ಬೆಟ್ಟ ಭೂಮಿಯನ್ನು ಕೆನರಾ ಪ್ರಿವಿಲೇಜ್ ಆ್ಯಕ್ಟ್ ಮೂಲಕ ನೀಡಲಾಗಿದೆ.
ಆದರೆ, ಅಧಿಕಾರಿಗಳು ಆಕಾರ್ ಬಂದ್ ಸರಿಪಡಿಸುವ ವೇಳೆ ದೋಷ ಮಾಡಿದ್ದು, ಉಪವಿಭಾಗದ ಸಂಪೂರ್ಣ ಬೆಟ್ಟಗಳು ಬ ಖರಾಬ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಸೊಪ್ಪಿನ ಬೆಟ್ಟ ಎಂದಿದ್ದರೂ ರೈತರ ಆಸ್ತಿ.
ಆಯಾ ಬೆಟ್ಟ ಭೂಮಿಯನ್ನು ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬಂದಿರುವ ರೈತರಿಗೆ ವಂಚನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ ಶಿರಸಿಯಲ್ಲಿ ಉಪ ವಿಭಾಗಾಧಿಕಾರಿಗೆ ಮನವಿ ನೀಡಿದ್ದೆವು. ಬಳಿಕ ಜನಪ್ರತಿನಿಧಿಗಳಿಗೂ ನಾವು ಮನವಿ ಮಾಡಿಕೊಂಡಿದ್ದೆವು ಎಂದರು.
ಸೊಪ್ಪಿನ ಬೆಟ್ಟ ಬಳಕೆದಾರ ರೈತರ ಸಮಸ್ಯೆ ಕುರಿತು ಶಾಸಕ ಭೀಮಣ್ಣ ನಾಯ್ಕ ಈಗಾಗಲೇ ಸದನದಲ್ಲಿ ಚರ್ಚೆ ನಡೆಸಿದ್ದಾರೆ.
ಈ ಕುರಿತಂತೆ ಸಚಿವ ಎಚ್. ಕೆ. ಪಾಟೀಲ ಅವರಿಗೂ ಮನವರಿಕೆ ಮಾಡಿದ್ದೇವೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೊಂದಿಗೆ ಎಚ್.ಕೆ. ಪಾಟೀಲ್ ಅವರೂ ಸಹ ಮಾತನಾಡಿದ್ದಾರೆ.
ಈ ಹಂತದಲ್ಲಿ ಪ್ರಯತ್ನ ನಡೆದಿರುವಾಗ ಸಮಸ್ಯೆ ಬಗೆಹರಿಸಲೇಬೇಕಿದೆ. ಹೀಗಾಗಿ, ಮುಖ್ಯಮಂತ್ರಿಗಳ ಜೊತೆಯೂ ರೈತರ ಸಹಿ ಇರುವ ಮನವಿಯೊಂದಿಗೆ ಚರ್ಚಿಸಲು ನಿರ್ಧರಿಸಿದ್ದೇವೆ ಎಂದರು.
ಬೆಟ್ಟ ಭೂಮಿ ತಜ್ಞ ವಿಶ್ವನಾಥ ಹೆಗಡೆ ಪುಟ್ಟನಮನೆ, ಶ್ರೀಪಾದ ಹೆಗಡೆ ಕಡವೆ, ದಿವಾಕರ ಹೆಗಡೆ ತೊಣ್ಣೇಮನೆ ಇತರರಿದ್ದರು.

ಹೆಚ್ಚಿನ ಸೌಲಭ್ಯಕ್ಕೆ ಆಗ್ರಹ

ಸೊಪ್ಪಿನ ಬೆಟ್ಟ ರೈತರ ಪಾಲಿಗೆ ಕೇವಲ ಕೃಷಿ ಕಾರ್ಯಕ್ಕಾಗಿ ಸೊಪ್ಪು ಸಂಗ್ರಹಕ್ಕೆ ಮಾತ್ರ ಸೀಮಿತವಾಗಿಲ್ಲ. ಅಡಕೆ ತೋಟಕ್ಕೆ ಮಣ್ಣು ಹಾಕಲು ರೈತರಿಗೆ ಸೊಪ್ಪಿನ ಬೆಟ್ಟದ ಭೂಮಿ ಅಗತ್ಯವಾಗಿದೆ.
ಆದರೆ, ಅರಣ್ಯ ಇಲಾಖೆ ಸೊಪ್ಪಿನ ಬೆಟ್ಟದಿಂದ ಮಣ್ಣು ಸಂಗ್ರಹಣೆಗೆ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಇಲಾಖೆ ಮತ್ತು ರೈತರ ನಡುವೆ ಅಂತರ ಹೆಚ್ಚಾಗುತ್ತಿದೆ.
ಹೀಗಾಗಿ ಸೊಪ್ಪಿನ ಬೆಟ್ಟದ ಬಳಕೆಯ ಕಾನೂನುಗಳು ಬದಲಾಗಬೇಕು ಎಂದರು. ಶಾಸಕ ಆರ್.ವಿ. ದೇಶಪಾಂಡೆ ಅವರ ಯತ್ನದಿಂದಾಗಿ ಸೊಪ್ಪಿನ ಬೆಟ್ಟದಲ್ಲಿ ಹಣ್ಣು ಅಥವಾ ಇನ್ನಿತರ ಬೆಳೆ ಬೆಳದರೆ ಅದರ ಆದಾಯದಲ್ಲಿ ಶೇ.75ರಷ್ಟನ್ನು ರೈತರಿಗೆ ನೀಡುವ ಬಗ್ಗೆ ಸೌಲಭ್ಯ ಜಾರಿಗೊಳಿಸಲಾಗಿತ್ತು.
ಆದರೆ, ಜಿಲ್ಲೆಯ ರೈತರು ಈ ಯೋಜನೆಯ ಲಾಭವನ್ನು ನಿರೀಕ್ಷಿತ ಪ್ರಮಾಣದಲ್ಲಿ ಪಡೆದಿಲ್ಲ. ಹೀಗಾಗಿ, ಸೊಪ್ಪಿನ ಬೆಟ್ಟಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು.
ಅಲ್ಲದೇ ಇತ್ತೀಚಿನ ದಿನಳಲ್ಲಿ ರೈತರ ಸೊಪ್ಪಿನ ಬೆಟ್ಟವನ್ನು ಹೊರಗಿನವರೂ ಅತಿಕ್ರಮಣ ತಡೆಯಲೂ ಸಹ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net