ಜೀವಜಲದ ಅಭಾವ ನೀಗಿಸಲು ಅಮೃತ್‌ಗೆ ಚಾಲನೆ

ಹೊನ್ನಾವರ ತಾಲೂಕಿನ ಮಂಕಿಯಲ್ಲಿ ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಎಂದು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಗೋವಿಂದ ನಾಯ್ಕ, ಶಿವರಾಮ ನಾಯ್ಕ, ಶಿವರಾಮ ಸಂಗುಮನೆ ಇತರಿದ್ದರು.
ಹೊನ್ನಾವರ ತಾಲೂಕಿನ ಮಂಕಿಯಲ್ಲಿ ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಎಂದು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಗೋವಿಂದ ನಾಯ್ಕ, ಶಿವರಾಮ ನಾಯ್ಕ, ಶಿವರಾಮ ಸಂಗುಮನೆ ಇತರಿದ್ದರು.
Published on
ಹೊನ್ನಾವರ: ಮಂಕಿಯಲ್ಲಿ ನೀರಿನ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಯೋಜನೆಗೆ ಚಾಲನೆ ನೀಡಲಾಗಿದೆ. ಏತ ನೀರಾವರಿ ಯೋಜನೆ ಬಂದರೆ ಜನರೇ ಬದುಕು ರೂಪಿಸಿಕೊಳ್ಳುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಮಂಕಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಂಕಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಶರಾವತಿ ಜಲಮೂಲದಿಂದ ಮಂಕಿ ಪಟ್ಟಣಕ್ಕೆ ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣ ಪಂಚಾಯಿತಿಗೆ 77 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಅದರಿಂದ ಎಲ್ಲರಿಗೂ ನೀರು ದೊರಕಿಸಲು ಸಾಧ್ಯವಿಲ್ಲ ಎಂದು ಮನಗಂಡು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. 106 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಅನುದಾನ ತರಲಾಗಿದೆ. ಇದರಿಂದ ಮತ್ತೆ ನೀರಿಗಾಗಿ ಯೋಚಿಸುವ ಅಗತ್ಯವಿಲ್ಲ. ಇನ್ನೊಂದು 1800 ಕೋಟಿ ರೂ. ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದ್ದೇನೆ. 200 ಕೋಟಿ ರೂ. ಟೆಂಡರ್‌ಗೆ ಹೋಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ನಮ್ಮ ಪಕ್ಷ ಜನಪರವಾದ ಯೋಜನೆಗಳನ್ನು ನೀಡಿ ಬಡವರ ಪರ ನಿಂತಿದೆ. ಮಂಕಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಿಸಲು 20 ಗುಂಟೆ ಜಾಗ ಮಂಜೂರಿ ಮಾಡಿದ್ದಾರೆ ಎಂದರು.
ಗ್ಯಾರಂಟಿ ಅನುಷ್ಠಾನ ಯೋಜನೆ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರವಾರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶಿವರಾಮ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಉಪ ವಿಭಾಗಾಧಿಕಾರಿ ಪ್ರವೀಣ ಕರಾಂಡೆ, ಪ.ಪಂ. ಸದಸ್ಯರಾದ ಸಂಜೀವ ನಾಯ್ಕ, ಗಜಾನನ ನಾಯ್ಕ, ಸತೀಶ ನಾಯ್ಕ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಸಂಗುಮನೆ, ವಾಮನ ನಾಯ್ಕ ಇದ್ದರು.

ಬಿಜೆಪಿ ವಿರುದ್ಧ ವಾಗ್ದಾಳಿ

‘ಬಿಜೆಪಿಯವರಿಗೆ ಒಂದು ಇಂದಿರಾ ಕ್ಯಾಂಟೀನ್ ಮಾಡಲೂ ಯೋಗ್ಯತೆಯಿಲ್ಲವಾಗಿತ್ತು. ನಾವು ಮಾಡಿದ್ದೇವೆ. ಏನಾದರೂ ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಬಾರದು. ಈ ಕಾಮಗಾರಿ ಕೇಂದ್ರ ಸರ್ಕಾರದ ಅನುದಾನ ಎಂದು ಹೇಳುತ್ತಾರೆ. ಆದರೆ, ಇದರಲ್ಲಿ ಶೇ. 50 ಮಾತ್ರ ಕೇಂದ್ರ ಸರ್ಕಾರದ ಅನುದಾನ, ಶೇ. 40 ರಾಜ್ಯ ಸರ್ಕಾರದ ಅನುದಾನ ಹಾಗೂ ಶೇ. 10 ಸ್ಥಳೀಯ ಸಂಸ್ಥೆಯ ಅನುದಾನದಿಂದ ಆಗಿದೆ. ನಾವು ಕೇಂದ್ರಕ್ಕೆ ಜಿಎಸ್‌ಟಿ ಕಟ್ಟುತ್ತಿದ್ದೇವೆ. ಅದೇ ದುಡ್ಡನ್ನು ನಮಗೆ ಕೊಟ್ಟಿದ್ದಾರೆ.’ ಎಂದು ಸಚಿವ ಮಂಕಾಳ ವೈದ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net