ಕಾರವಾರ: ಭಾರಿ ಚಳಿ ಹಾಗೂ ಬೆಲೆ ಹೆಚ್ಚಳದಿಂದ ಮದ್ಯ ಪ್ರಿಯರು ಬೀಯರ್ ಬಿಟ್ಟು ಮದ್ಯ (ಐಎಂಎಲ್) ಬಳಕೆ ಹೆಚ್ಚು ಮಾಡಿದ್ದಾರೆ. ಹೊಸ ವರ್ಷ ಆಚರಣೆಯಲ್ಲೂ ಇದೇ ಟ್ರೆಂಡ್ ಕಂಡುಬAದಿದೆ.
ಅಬಕಾರಿ ಇಲಾಖೆ ಅಂಕಿ, ಅಂಶಗಳನ್ನು ನೋಡಿದಾಗ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಕುಮಟಾ, ಹೊನ್ನಾವರ ತಾಲೂಕು ಹೊರತುಪಡಿಸಿ ಉಳಿದೆಲ್ಲ ಕಡೆ ಡಿಸೆಂಬರ್‌ನಲ್ಲಿ ಬಿಯರ್ ಬಳಕೆ ತೀರ ಕಡಿಮೆ ಆಗಿರುವುದು ಕಂಡುಬರತ್ತಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಚಳಿ ಕಂಡು ಬರುತ್ತಿದೆ. ಕೆಲವು ದಿನದ ಉಷ್ಣಾಶ 10 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಗೆ ಇಳಿಯುತ್ತಿದೆ. ಕರಾವಳಿಯಲ್ಲೂ ಈ ವರ್ಷ ಚಳಿಯ ಅನುಭವ ಉಂಟಾಗುತ್ತಿದೆ. ಇದರಿಂದ ಚಿಲ್ಡ್ ಬಿಯರ್ ಕುಡಿದು ಮೈ ಬೆಚ್ಚಗಾಗಿಸುವ ಪರಿಸ್ಥಿತಿ ಇಲ್ಲ. ಹಾಗಾಗಿ ಹಾಟ್ ಡ್ರಿಂಕ್‌ಗಳನ್ನು ಜನ ಹೆಚ್ಚು ಬಳಸುತ್ತಿದ್ದಾರೆ. ಇನ್ನು ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಸಾಮಾನ್ಯ ಮದ್ಯ ಹಾಗೂ ಬಿಯರ್‌ಗೆ ಹೋಲಿಸಿದರೆ ಮದ್ಯವೇ ಸೋವಿ ಎನ್ನಿಸುತ್ತಿದೆ ಎಂದು ಬಾರ್ ಮಾಲೀಕರೊಬ್ಬರು ಹೇಳಿದರು.
ಅಂದಾಜು ಹೇಗೆ..?
ಜಿಲ್ಲೆಯಲ್ಲಿ ಸುಮಾರು 80 ಕ್ಕೂ ಅಽಕ ವೈನ್ ಶಾಪ್‌ಗಳು, 22 ಕ್ಕೂ ಅಽಕ ಎಂಎಸ್‌ಐಎಲ್ ಮಳಿಗೆಗಳು, 30ಕ್ಕೂ ಅಧಿಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ 180 ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತದೆ. ಅವುಗಳಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ(ಕೆಎಸ್‌ಬಿಸಿಎಲ್‌ನಿಂದ) ಮದ್ಯ ಮತ್ತು ಬಿಯರ್ ಪೂರೈಕೆಯಾಗುತ್ತದೆ.
ಜಿಲ್ಲೆಯ ಮದ್ಯ ಮಾರಾಟಗಾರರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 98, 634 ಬಾಕ್ಸ್ ಭಾರತೀಯ ಮದ್ಯ ಖರೀದಿಸಿದ್ದರು. ಈ ವರ್ಷ ಇದೇ ಅವಽಯಲ್ಲಿ 1.02 ಬಾಕ್ಸ್ ಲಕ್ಷ ಖರೀದಿ ಮಾಡಿದ್ದಾರೆ.. ಕಳೆದ ಸಾರಿಗೆ ಹೋಲಿಸಿದರೆ 3,714 ಬಾಕ್ಸ್ ಹೆಚ್ಚುವರಿ ಖರೀದಿಯಾಗಿದೆ.ಪ್ರತಿ ತಾಲೂಕಿನಲ್ಲಿ ಕನಿಷ್ಠ 144 ರಿಂದ ಗರಿಷ್ಠ 1425 ಬಾಕ್ಸ್ವರೆಗೂ ಮದ್ಯದ ಖರೀದಿಯಲ್ಲಿ ಹೆಚ್ಚಳವಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ 77.642 ಬಾಕ್ಸ್ ಬೀಯರ್ ಬಳಕೆಯಾಗಿತ್ತು. ಈ ವರ್ಷ ಬಿಯರ್ ಖರೀದಿ 80,915 ಬಾಕ್ಸ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ 3.273 ಬಾಕ್ಸ್ ಹೆಚ್ಚುವರಿ ಖರೀದಿಯಾಗಿರುವುದು ಕಂಡುಬರುತ್ತದೆ. ಆದರೆ, ಕುಮಟಾ ಒಂದೇ ತಾಲೂಕಿನಲ್ಲಿ 2713 ಬಾಕ್ಸ್ , ಹೊನ್ನಾವರದಲ್ಲಿ 1078 ಬಾಕ್ಸ್, ಕಾರವಾರದಲ್ಲಿ 612 ಬಾಕ್ಸ್ ಕಳೆದ ವರ್ಷಕ್ಕಿಂತ ಹೆಚ್ಚುವರಿ ಬಿಯರ್ ಖರೀದಿಯಾಗಿದೆ. ಅಂಕೋಲಾ, ಭಟ್ಕಳ, ಶಿರಸಿ, ದಾಂಡೇಲಿ ತಾಲೂಕುಗಳಲ್ಲಿ ಕಳೆದ ವರ್ಷಕ್ಕಿಂತ ಬಿಯರ್ ಖರೀದಿ ಇಳಿಕೆಯಾಗಿದೆ. ಯಲ್ಲಾಪುರ ತಾಲೂಕಿನಲ್ಲಿ ಅತ್ಯಲ್ಪ ಎಂದರೆ 11 ಬಾಕ್ಸ್ ಮಾತ್ರ ಏರಿಕೆ ಕಂಡಿದೆ.
ಕೊನೆಯ ವಾರದಲ್ಲಿ ಇಳಿಕೆ:
ಡಿಸೆಂಬರ್ 26 ರಿಂದ 31 ರವರೆಗೆ ನ್ಯೂ ಇಯರ್ ಪಾರ್ಟಿಗಾಗಿ ಲೈಸನ್ಸ್ದಾರರು ಹೆಚ್ಚುವರಿ ಮದ್ಯ ಸಂಗ್ರಹಿಸುವುದು ವಾಡಿಕೆ. ಆದರೆ, ಈ ವರ್ಷ ಕಳೆದ ಬಾರಿಗಿಂತ ಕಡಿಮೆ ಮದ್ಯ ಖರೀದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,830 ಬಿಯರ್ ಬಾಕ್ಸ್ ಹಾಗೂ 726 ಬಾಕ್ಸ್ ಭಾರತೀಯ ಮದ್ಯ ಖರೀದಿ ಕಡಿಮೆಯಾಗಿದೆ.
"
ಕೆಎಸ್‌ಬಿಸಿಎಲ್ ಗೋಡೌನ್‌ಗಳಿಂದ ಲೈಸೆನ್ಸ್ದಾರರಿಗೆ ಪೂರೈಕೆಯಾಗುವ ಮದ್ಯದ ಆಧಾರದ ಮೇಲೆ ನಾವು ಇಷ್ಟು ಮದ್ಯ ಬಳಕೆಯಾಗಿದೆ ಎಂದು ಹೇಳಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಖರೀದಿ ಹೆಚ್ಚಿದೆ. ಕೆಲವು ತಾಲೂಕುಗಳಲ್ಲಿ ಬಿಯರ್ ಖರೀದಿ ಕಡಿಮೆಯಾಗಿದೆ.