ಕೆಲ ದಶಕಗಳ ಹಿಂದೆ ತಾಲೂಕು ಕೇಂದ್ರಗಳಲ್ಲಿ ಮಾತ್ರ ಸರ್ಕಾರಿ ಪಿಯು ಕಾಲೇಜ್‌ಗಳಿದ್ದವು. ದೂರ ಹೋಗಿ ಕಲಿಯಲಾರದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೈಸ್ಕೂಲ್ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದರು. ಅದನ್ನು ತಪ್ಪಿಸಲು ಊರಿನ ಹಿರಿಯರು ಯಾರಿಂದಲೋ ಭೂಮಿ ದಾನ ಪಡೆದು, ಕಷ್ಟಪಟ್ಟು ದೇಣಿಗೆ ಸಂಗ್ರಹಿಸಿ ಕಟ್ಟಡ ಕಟ್ಟಿ, ಅಽಕಾರಿಗಳ ಬಳಿ ಬೇಡಿಕೊಂಡು ಅನುಮತಿ ಪಡೆದು ಪಿಯು ಕಾಲೇಜ್‌ಗಳನ್ನು ಪ್ರಾರಂಭಿಸಿದ್ದರು. ಆ ಪಿಯು ಕಾಲೇಜ್‌ಗಳು ಸಾವಿರಾರು ಗ್ರಾಮೀಣ ಪ್ರತಿಭೆಗಳು ಅರಳಲು ಕಾರಣವಾಗಿವೆ. ಸರ್ಕಾರ ಒಂದು ಹಂತದದಲ್ಲಿ ಅವುಗಳಿಗೆ ವೇತನಾನುದಾನ ಮಂಜೂರು ಮಾಡಿತು. ಎಂದರೆ ಉಪನ್ಯಾಸಕರ ವೇತನವನ್ನು ಸರ್ಕಾರ ಭರಿಸುತ್ತಿತ್ತು. ಆದರೆ, `ವೇತನ ಹೊರತಾಗಿ ಕಟ್ಟಡ ಅಥವಾ ಇತರ ಯಾವುದೇ ಮೂಲ ಸೌಕರ್ಯಕ್ಕೂ ಸರ್ಕಾರ ಅನುದಾನ ನೀಡದು. ವೇತನಾನುದಾನಕ್ಕೂ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಕೊಕ್ಕೆ ಹಾಕಿದೆ. 13 ವರ್ಷಗಳಿಂದ ಅನುದಾನಿತ ಕಾಲೇಜ್‌ಗಳಿಗೆ ಹೊಸ ನೇಮಕಾತಿಗೆ ಅನುಮತಿಯನ್ನೇ ನೀಡಿಲ್ಲ. ನೀವು ದೇಣಿಗೆ ಪಡೆದು ನಡೆಸಿ ಎಂಬ ಉತ್ತರ ಬರುತ್ತಿದೆ. ಎಷ್ಟೆಂದು ದೇಣಿಗೆ ಸಂಗ್ರಹಿಸೋಣ...?ಡೊನೇಶನ್ ಪಡೆಯಲು ಕಾನೂನಿನ ಅಡ್ಡಿ ಬರುತ್ತದೆ.ಅಲ್ಲಿ ಕಲಿತಂತೆ ಇಲ್ಲಿಯೂ ವಿದ್ಯಾರ್ಥಿಗಳು ಕಲಿಯುತ್ತಾರೆ. ಸರ್ಕಾರ ತಾರತಮ್ಯ ಮಾಡುವುದೇಕೆ..?' ಎಂದು ಅನುದಾನಿತ ಪಿಯು ಕಾಲೇಜ್ ಒಂದರ ಆಡಳಿತ ಮಂಡಳಿ ಅಧ್ಯಕ್ಷರು ಅಲವತ್ತುಕೊಂಡರು.