

ಯಲ್ಲಾಪುರ: ಏಳು ವರ್ಷಗಳ ಹಿಂದೆ ದಾಂಡೇಲಿಯಲ್ಲಿ ವಕೀಲ, ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ನಗರಸಭೆ ಸದಸ್ಯ, ಕಾಂಗ್ರೆಸ್ ಮುಖಂಡ ಅಜಿತ್ ನಾಯಕ ಅವರನ್ನು ಹತ್ಯೆ ಮಾಡಿದ್ದ ದಾಂಡೇಲಿಯ ಪಾಂಡುರoಗ ಕಾಂಬಳೆ ಎಂಬಾತನನ್ನು ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಯಲ್ಲಾಪುರ ಪೀಠದಿಂದ ಶುಕ್ರವಾರ ಈ ತೀರ್ಪು ನೀಡಿದ್ದು, ಜ.13 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.
2018ರ ಜುಲೈ 27 ರಂದು ದಾಂಡೇಲಿಯ ಬೇಕರಿಯೊಂದರ ಎದುರು ಅಜಿತ್ ನಾಯಕ ಅವರ ಬರ್ಬರ ಹತ್ಯೆಯಾಗಿತ್ತು. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ವಕೀಲರೊಬ್ಬರ ಹತ್ಯೆ ಪ್ರಕರಣ ಇದಾಗಿತ್ತು. ರಾಜ್ಯಾದ್ಯಂತ ವಕೀಲರು ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದಾಂಡೇಲಿ ನಗರ ಠಾಣೆ ಪೊಲೀಸರು ಪಾಂಡುರಂಗ ಕಾಂಬಳೆ ಹಾಗೂ ಇನ್ನೂ ನಾಲ್ವರನ್ನು ಬಂಧಿಸಿದ್ದರು. ಅಜಿತ್ ಅವರು ವಕಾಲತ್ತು ವಹಿಸಿದ್ದ ಭೂ ವಿವಾದದ ಪ್ರಕರಣವೊಂದರ ದ್ವೇಷದಲ್ಲಿ ಈ ಕೊಲೆ ನಡೆದಿರುವುದು ಕಂಡುಬಂದಿತ್ತು. ಪಾಂಡುರoಗ ಕಾಂಬಳೆ ಜರ್ಕೀನ್ ಧರಿಸಿ ಅದರೊಳಗೆ ಕತ್ತಿಯನ್ನು ಅಡಗಿಸಿಟ್ಟುಕೊಂಡು, ಅಜಿತ ನಾಯ್ಕ ಅವರು ತಮ್ಮ ಕಚೇರಿಯಿಂದ ಹೊರ ಬರುತ್ತಿರುವಾಗಲೇ ಅವರ ಮೇಲೆ ದಾಳಿ ನಡೆಸಿದ್ದ ಎಂಬುದು ಗೊತ್ತಾಗಿತ್ತು. ಆಗಿನ ಪಿಐ ಎ.ಎ. ಮುಜಾವರ್, ಪಿ ಸಿ ಮಂಜುನಾಥ ಎಚ್ ಶೆಟ್ಟಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸಾಕ್ಷಿ ಹೇಳಲು ಸಾಕ್ಷಿದಾರರು ಹಿಂದೇಟು ಹಾಕಿದ್ದರು. ಕೊಲೆ ಆಗಿರುವುದನ್ನು ಕಣ್ಣಾರೆ ಕಂಡವರಿದ್ದರೂ ಅವರು ನ್ಯಾಯಾಲಯದ ಮುಂದೆ ಬರಲಿಲ್ಲ. ಆದರೆ, ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಸಮರ್ಥವಾದ ವಾದ ಮಂಡಿಸಿದ್ದರು. ಸಾಂದರ್ಭಿಕ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕೊಲೆಗಾರ ಕೊಲೆ ಮಾಡಿದ ಕತ್ತಿಯ ಮೇಲೆ ಹಾಗೂ ಆತನ ಬಟ್ಟೆಯ ಮೇಲಿದ್ದ ರಕ್ತದ ಕಲೆಗಳು ಅಜಿತ ನಾಯಕ ಅವರ ರಕ್ತದ ಗುಂಪಿಗೆ ಹೊಂದಾಣಿಕೆಯಾಗುತ್ತಿದ್ದವು. ಆತ ಬಳಸಿದ ಬೈಕ್ ಸಾಕ್ಷಿ ನೀಡುತ್ತಿತ್ತು. ಅವುಗಳನ್ನೇಲ್ಲ ಪರಿಗಣಿಸಿದ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಅಪರಾಧ ಮಾಡಿರುವುದನ್ನುಖಚಿತ ಮಾಡಿಕೊಂಡಿದ್ದಾರೆ.
ನ್ಯಾಯಾಲಯ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ವಿರುದ್ಧದ ಆರೋಪ ಸಾಬೀತಾಗಿರುವುದನ್ನು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಶಿರಸಿ ಪೀಠದಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ. ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷಿ ಕೊರತೆಯಿಂದ ಖುಲಾಸೆಗೊಳಿಸಿದೆ.
ವಕೀಲರೊಬ್ಬರ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿದೆ. ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು' ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ. ಮಾನ್ಯ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇನೆ.
ರಾಜೇಶ ಎಂ.ಮಳಗೀಕರ್
ಸರ್ಕಾರಿ ಅಭಿಯೋಜಕ