ಕೈಗಾಕ್ಕೆ ತೆರಳುತ್ತಿದ್ದ ಬೃಹತ್‌ ವಾಹನ ಪಲ್ಟಿ: ವಿಕಿರಣ ರಕ್ಷಾ ಕವಚಕ್ಕೆ ಹಾನಿ ಸಾಧ್ಯತೆ

ಕೈಗಾಕ್ಕೆ ತೆರಳುತ್ತಿದ್ದ ಬೃಹತ್‌ ವಾಹನ ಪಲ್ಟಿಯಾಗಿದೆ.
ಕೈಗಾಕ್ಕೆ ತೆರಳುತ್ತಿದ್ದ ಬೃಹತ್‌ ವಾಹನ ಪಲ್ಟಿಯಾಗಿದೆ.
Published on
ಕಾರವಾರ: ಕೈಗಾದಲ್ಲಿ ನಿರ್ಮಾಣವಾಗುತ್ತಿರುವ ಎರಡು ಹೊಸ ಅಣು ವಿದ್ಯುತ್ ಸ್ಥಾವರಕ್ಕೆ ಬಳಸುವ ಸಲುವಾಗಿ ಸಾಗಿಸುತ್ತಿದ್ದ ಬೃಹತ್ ಗಾತ್ರದ ವಿಕಿರಣ ರಕ್ಷಾ ಕವಚ ಹೊತ್ತಿದ್ದ ವಾಹನ ಗುರುವಾರ ಪಲ್ಟಿಯಾಗಿದೆ.
ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಇನ್ನೂ 4 ಕಿಮೀ ಇರುವ ಮುಂಚೆ ಹರ್ಟೂಗಾ ಬಳಿ ಬೃಹತ್ ಲಾರಿ ಪಲ್ಟಿಯಾಗಿದ್ದು, ಕೈಗಾ-ಮಲ್ಲಾಪುರ ವಾಹನ ಸಂಚಾರ ಸ್ಥಗಿತವಾಗಿದೆ. ವಿಕಿರಣ ರಕ್ಷಾ ಕವಚ ಸಾಮಗ್ರಿಗೆ ಹಾನಿಯಾಗಿರುವ ಸಾಧ್ಯತೆ ಇದೆ.
ಕೈಗಾದ 5 ಮತ್ತು 6 ನೇ ಅಣು ವಿದ್ಯುತ್ ಘಟಕದಲ್ಲಿ ನಿರ್ಮಾಣವಾಗುವ ಅಣು ರಿಯಾಕ್ಟರ್‌ನಿಂದ ವಿಕಿರಣಗಳು ಸೋರಿಕೆಯಾಗದಂತೆ ಅಂತ್ಯದಲ್ಲಿ ಅಳವಡಿಸುವ `ಎಂಡ್ ಕ್ಯಾಪ್' ಎಂಬ ಲೋಹದ ಸಾಧನ ಇದಾಗಿದೆ. ಬಹು ಕೋಟಿ ವೆಚ್ಚದ ಈ ಸಾಧನವನ್ನು ಎಲ್ ಆ್ಯಂಡ್ ಟಿ ಕಂಪನಿ ಗುತ್ತಿಗೆ ಪಡೆದು ತಯಾರಿಸಿದೆ. ಗುಜರಾತ್‌ನ ಸೂರತ್‌ನಿಂದ ಇಲ್ಲಿವರೆಗೆ ಸಾಗಿಸುವ ಜವಾಬ್ದಾರಿಯನ್ನು ನೆಬ್ರೋಸ್ ಎಂಬ ಕಂಪನಿ ಮಾಡುತ್ತಿದೆ.
ಈ ಎಂಡ್ ಕ್ಯಾಪ್ 140 ಮೆಟ್ರಿಕ್ ಟನ್ ಭಾರವಿದೆ. ಸುಮಾರು 9 ಮೀಟರ್ ವ್ಯಾಸವಿದೆ. ಸಾಮಾನ್ಯ ರಸ್ತೆಯಲ್ಲಿ ಇದು ಸಾಗುವುದು ದುಸ್ತರವಾಗಿದೆ. ಈ ಸಾಮಗ್ರಿ ಸಾಗಿಸಲು ಕಾರವಾರ ತಾಲೂಕಿನ ಹಲವೆಡೆ ವಿದ್ಯುತ್, ಇಂಟರ್‌ನೆಟ್ ತಂತಿಗಳನ್ನು ತುಂಡು ಮಾಡಲಾಗಿತ್ತು.
ಎಂಡ್ ಕ್ಯಾಪ್‌ನ್ನು ಅದಕ್ಕಾಗಿಯೇ ತಯಾರಿಸಲಾದ ಹಲವು ಚಕ್ರಗಳು ಹಾಗೂ ಹೈಡ್ರಾಲಿಕ್ ಉಳ್ಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ. ಫೆ 9 ರಂದು ಗುಜರಾತ್‌ಗೆ ಹೊರಟ ಈ ವಾಹನ ಎರಡು ತಿಂಗಳ ಬಳಿಕ ಏ.9 ಕ್ಕೆ ಕಾರವಾರ ಅರಗಾ ತಲುಪಿತ್ತು. ಆಮೆಯಂತೆ ನಿಧಾನವಾಗಿ ಚಲಿಸಿದ ನಂತರ ಏ.5 ರಂದು ಮಲ್ಲಾಪುರ ತಲುಪಿತ್ತು. ಮೂರು ತಿಂಗಳಲ್ಲಿ ಸುಮಾರು 1 ಸಾವಿರ ಕಿಮೀಗಳನ್ನು ಅತಿ ನಿಧಾನವಾಗಿ ಸುರಕ್ಷಿತವಾಗಿ ಸಾಗಿ ಬಂದ ವಾಹನವು ಗಮ್ಯ ಸ್ಥಾನ 4 ಕಿಮೀ ಇತ್ತು ಎನ್ನುವಾಗ ಪಲ್ಟಿಯಾಗಿರುವುದು ಮಾತ್ರ ದುರಂತ.
ಬಂದ್ ಆಗಿರುವ ಕೈಗಾ ರಸ್ತೆಯನ್ನು ತೆರವು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಎಂಡ್ ಕ್ಯಾಪ್ ಮೇಲೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
..........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net