ಹೆಸರಿಗೆ ಮಾತ್ರವಾದ ಜೀವ ವೈವಿಧ್ಯ ಕಾಯ್ದೆ Law

ಪಶ್ಚಿಮ ಘಟ್ಟ
ಪಶ್ಚಿಮ ಘಟ್ಟ
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಗೆ ಅನಂತ ಅಶಿಸರ ಪತ್ರ
  • ಕಾನೂನು ಅನುಷ್ಠಾನಕ್ಕೆ ಇಲ್ಲ ಇಚ್ಛಾಶಕ್ತಿ
  • ಪಶ್ಚಿಮ ಘಟ್ಟದ ಜೀವಸಂಕುಲ ಸೂರೆ ಅವ್ಯಾಹತ
ಶಿರಸಿ: ಅರಣ್ಯ ಇಲಾಖೆ ಕಡ್ಡಾಯವಾಗಿ ಜೀವ ವೈವಿಧ್ಯ ಕಾಯ್ದೆ (Law) ಅನುಷ್ಠಾನ ಮಾಡುವಂತಾಗಬೇಕು ಎಂದು ಆಗ್ರಹಿಸಿ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಅಶಿಸರ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, 20 ವರ್ಷಗಳಿಂದ ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಅದನ್ನು ಅನುಷ್ಠಾನ ಮಾಡಬೇಕಿರುವ ಅರಣ್ಯ ಅಧಿಕಾರಿಗಳು ಎಲ್ಲೂ ಈ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಿಲ್ಲ.
30 ಜಿಲ್ಲೆಗಳಲ್ಲಿ ನ್ಯಾಯಾಲಯಗಳಲ್ಲಿ ಜೀವ ವೈವಿಧ್ಯ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ಇಲ್ಲ.
ನ್ಯಾಯಾಧೀಶರು, ವಕೀಲರಿಗೆ ಜೀವ ವೈವಿಧ್ಯ ಕಾನೂನಿನ ಬಗ್ಗೆ ಜೀವವೈವಿಧ್ಯ ಮಂಡಳಿಯೇ ಮುಂದಾಗಿ ಸಂವಹನ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಘಟ್ಟದ ಅಪಾರ ಜೀವ ಸಂಕುಲ ಸೂರೆ ಆಗುತ್ತಿದ್ದರೂ ಜೀವ ವೈವಿಧ್ಯ ಕಾಯ್ದೆಯಡಿ ರಕ್ಷಣೆ ನೀಡಲಾಗುತ್ತಿಲ್ಲ.
ಗೋಮಾಳ, ಕಾನು, ಗುಡ್ಡ, ಕೆರೆ, ಜಲಚರ, ದೇವರಕಾಡು, ಮಿರಿಸ್ಟಿಕಾ ವಿನಾಶದ ಅಂಚಿನ ಸಸ್ಯ, ಔಷಧಿ ಮೂಲಿಕೆ, ಅಳಿವೆಗಳು ಇವೆಲ್ಲ ಜೆ.ಸಿ.ಬಿ ಕಾರ್ಯಾಚರಣೆಗೆ, ಅಕ್ರಮ ಗಣಿಗಾರಿಕೆಗೆ ಬಲಿ ಆಗುವುದನ್ನು ತಪ್ಪಿಸಲು ಜೀವ ವೈವಿಧ್ಯ ಕಾನೂನಿನಲ್ಲಿ ಸಹಾಯ ಮಾಡಬಹುದಿತ್ತು.
ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಸ್ಥಿತಿ ಇದೆ. ಅರಣ್ಯ ಇಲಾಖೆ ಅರಣ್ಯಗಳ ನಿರ್ವಹಣಾ ಯೋಜನೆ ವರ್ಕಿಂಗ್ ಪ್ಲಾೃನ್‌ನಲ್ಲಿ ಜೀವ ವೈವಿಧ್ಯ ಅಂಶಗಳಿಗೆ ಆದ್ಯತೆ ನೀಡಬೇಕು ಎಂಬ ಸಂಗತಿಯನ್ನು ಪರಿಗಣಿಸಿಲ್ಲ.
ಏಕಜಾತಿ ನೆಡುತೋಪು, ಜೆ.ಸಿ.ಬಿಯಿಂದ ಅರಣ್ಯ ಭೂಮಿಯಲ್ಲಿ ಕಾರ್ಯಾಚರಣೆ ನಡೆಸುವ ಪದ್ಧತಿ ಕೈ ಬಿಟ್ಟಿಲ್ಲ. ಸ್ವಾಭಾವಿಕ ಅರಣ್ಯಗಳು, ಕುರುಚಲು ಕಾಡು, ಔಷಧಿ ಸಸ್ಯ ಸಂರಕ್ಷಿತ ಪ್ರದೇಶ, ಡೀಮ್ಡ್ ಅರಣ್ಯಗಳ ಸಂರಕ್ಷಣಾ ಯೋಜನೆಗೆ ಒತ್ತು ನೀಡುವ ನೀತಿ ಜಾರಿ ಮಾಡುತ್ತಿಲ್ಲ.
ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಭೂಮಿ ನೀಡುವಾಗ ದೊಡ್ಡ ಮರಗಳನ್ನು ಮಾತ್ರ ಲೆಕ್ಕಮಾಡಿ ಅರಣ್ಯನಾಶ ಗೌಣ ಮಾಡಿ ತೋರಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
11 ಮತ್ಸ್ಯಾಧಾಮಗಳ ಸಂರಕ್ಷಿತ ಪ್ರದೇಶ ಘೋಷಣೆ 4 ವರ್ಷಗಳಿಂದ ಬಾಕಿ ಇದೆ. ದೇಶದಲ್ಲೇ ಮೊದಲಾಗಿ ಜೀವ ವೈವಿಧ್ಯ ಪಾರಂಪರಿಕ ತಾಣಗಳ ಘೋಷಣೆ ಕರ್ನಾಟಕದಲ್ಲಿ ಆಗಿದೆ.
ನಿರ್ಣಯ ಕೈಗೊಂಡಿರುವ 12 ಅಪರೂಪದ ನೈಸರ್ಗಿಕ ಜೀವ ವೈವಿಧ್ಯ ತಾಣಗಳು ಇನ್ನೂ ಘೋಷಣೆಗೆ ಬಾಕಿ ಇವೆ. ಇವುಗಳಲ್ಲಿ ಕೋಲಾರದ ಅಂತರ ಗಂಗೆಬೆಟ್ಟ, ಬೆಂಗಳೂರಿನ ರೋರಿಕ್ ಎಸ್ವೇಟ್, ಹಳೇ ಸೊರಬ ದೇವರಕಾಡು, ಅಘನಾಶಿನಿ ಅಪ್ಪೇಮಿಡಿ ತಾಣ ಮುಂತಾದವು ಸೇರಿವೆ ಎಂದಿದ್ದಾರೆ.
ಸಾವಯವ ಕೃಷಿ, ಸಾಂಬಾರು ವೃಕ್ಷಗಳ ಅಭಿವೃದ್ಧಿ, ಬೀಜ ವೈವಿಧ್ಯ, ಕಿರುಧಾನ್ಯ, ಹಲಸು, ತಳಿವೈವಿಧ್ಯ ಇವೆಲ್ಲವುಗಳ ಸುಸ್ಥಿರ ಅಭಿವೃದ್ಧಿ ಜೊತೆ ಜೀವ ವೈವಿಧ್ಯ ಕ್ಷೇತ್ರ ಬೆಸೆದುಕೊಳ್ಳಬೇಕು.
ಬಹು ಅಪರೂಪದ ಪಕ್ಷಿ ವೈವಿಧ್ಯ ಹೊಂದಿರುವ ಪುಟ್ಟ ಸೋಂದಾ ಮುಂಡಿಗೆ ಕೆರೆಗೆ ಜೀವ ವೈವಿಧ್ಯ ತಾಣ ಪಟ್ಟ ನೀಡಿದಂತೆ ರಾಜ್ಯದ 6000 ಪಂಚಾಯತಿಗಳಲ್ಲಿ ಜಲ ವೈವಿಧ್ಯ ತಾಣ ಗುರುತಿಸಬೇಕು.
"

15 ವರ್ಷ ಹಿಂದೆ ಹೊಗ್ರೆಕಾನುಗಿರಿ, ಕೊಡಚಾದ್ರಿ ಬೆಟ್ಟಗಳನ್ನು ಗಣಿಗಾರಿಕೆಯಿಂದ ರಕ್ಷಿಸಿದ್ದು ಜೀವ ವೈವಿಧ್ಯ ಕಾಯಿದೆ ಸಹಾಯದಿಂದ ಎಂಬುದನ್ನು ನೆನಪಿಡಬೇಕು.

— ಅನಂತ ಅಶೀಸರ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net