

ಸುಭಾಸ ಧೂಪದಹೊಂಡ ಕಾರವಾರ
ಅಂದದ ಚಂದಿರನ ಅಂತರಾಳವನ್ನು ಅರಿಯುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮೂರನೇ ಪ್ರಯತ್ನ `ಚಂದ್ರಯಾನ-3' ಬಗ್ಗೆ ವಿಶ್ವದೆಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಭಾರತೀಯ ಇಂಜಿನಿಯರ್‌ಗಳ ಮಹತ್ವಾಕಾಂಕ್ಷಿ ಯೋಜನೆಗೆ ದೇಶದ ಜನ ಶಹಭಾಷ್ ಎನ್ನುತ್ತಿದ್ದಾರೆ. ಈ ತಂಡದಲ್ಲಿ ಉತ್ತರ ಕನ್ನಡದವರೊಬ್ಬರ ಕೊಡುಗೆಯೂ ಇದೆ ಎಂಬುದೇ ಹೆಮ್ಮೆಯ ಸಂಗತಿ.
ಇದನ್ನೂ ಓದಿ:ಆದಿತ್ಯ ಎಲ್1: ಚಂದ್ರಯಾನದ ಬಳಿಕ ಇಸ್ರೋ ಸೂರ್ಯಯಾನ!
ಮುರ್ಡೇಶ್ವರ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಆಕಾಶ ಶೆಟ್ಟಿ ಎಂಬುವವರು ಇಸ್ರೋ ಚಂದ್ರಯಾನ-3 ರ ಸ್ಪೇಸ್‌ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್‌ನಲ್ಲಿ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ, ಯೋಜನೆಯ ಯಶಸ್ವಿಗೆ ತಮ್ಮ ಕೊಡುಗೆ ನೀಡಿದ್ದಾರೆ.
ಚಂದ್ರನ ಮೇಲೆ ಇಳಿಯಲಿರುವ ಲ್ಯಾಂಡರ್‌ನ ಲೆಗ್‌ಗಳ ಜೋಡಣೆ ಹಾಗೂ ಪರಿಶೀಲನೆ, ಚಂದ್ರನ ಮೇಲೆ ಇಳಿಯಲು ರೋವರ್ ರ‍್ಯಾಂಪ್ ಅಭಿವೃದ್ಧಿ, ಹಾಗೂ ಐಎಲ್‌ಎಸ್‌ಎ ಪ್ಲೋಲೋಡ್ ಬಿಡುಗಡೆ ವಿಭಾಗವನ್ನು ಆಕಾಶ ಅವರ ನೇತೃತ್ವದ ಐವರು ಇಂಜಿನಿಯರ್‌ಗಳು ಹಾಗೂ ಐವರು ಸಹಾಯಕರ ತಂಡ ನೋಡಿಕೊಂಡಿದೆ.
ಇಸ್ರೋ ಚಂದ್ರಯಾನ-3 ಬಗ್ಗೆ ಸಿದ್ಧಪಡಿಸಿದ ವಿಡಿಯೋದಲ್ಲೂ ಆಕಾಶ ಶೆಟ್ಟಿ ಅವರನ್ನು ಕಾಣಬಹುದು.
2015 ರಿಂದ ಆಕಾಶ ಅವರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಂದ್ರಯಾನ-2 ದಲ್ಲಿ ಅವರು ಲ್ಯಾಂಡರ್ ರೋವರ್ ರ‍್ಯಾಂಪ್ ಅಭಿವೃದ್ಧಿ, ಐಎಲ್‌ಎಸ್‌ಎ ಪ್ಲೇಲೋಡ್ ಬಿಡುಗಡೆ ತಂತ್ರಜ್ಞಾನ, ಆರ್ಬಿಟರ್‌ನಲ್ಲಿ ಕ್ಲಾಸ್ ಪ್ಲೇಲೋಡ್ ಡೋರ್ ರಿಲೀಸ್ ಮೆಕ್ಯಾನಿಸಮ್, ಟಿಟಿಸಿ ಅಂಟೇನಾ ಮೆಕ್ಯಾನಿಸಮ್ ಮುಂತಾದ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದರು.
`ಚಂದ್ರಯಾನ-2 ವಿಫಲವಾದ ನಂತರ ಅದೇ ಗುಂಪು ಚಂದ್ರಯಾನ 3 ಮಾಡುವಲ್ಲಿ ಕಾರ್ಯಪ್ರವೃತ್ತವಾಯಿತು. ಕಳೆದ ಒಂದು ವರ್ಷದಲ್ಲಿ ನಾವು ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸಿದ್ದೇವೆ.
ಚಂದ್ರಯಾನ -3 ಮುಕ್ತಾಯವಾಗುವವರೆಗೂ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ. ನಮ್ಮ ಟೀಮ್ ನೋಡಿಕೊಂಡ ಅಥವಾ ಅಭಿವೃದ್ಧಿ ಮಾಡಿದ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುವವರೆಗೆ ನಮಗೆ ಟೆನ್ಶನ್ ಇದ್ದೇ ಇರುತ್ತದೆ' ಎನ್ನುತ್ತಾರೆ ಆಕಾಶ್.
ವಿಡಿಯೋ ನೋಡಲು ಈ ಲಿಂಕ್ ಒತ್ತಿ https://fb.watch/lOH3FPKh6_/?mibextid=Nif5oz
ಭಟ್ಕಳದಲ್ಲೇ ಓದು:
ಆಕಾಶ ಅವರ ಅಜ್ಜಿಯ ಮನೆ ಮುರ್ಡೇಶ್ವರ. ಅವರ ಅಮ್ಮ ಇಲ್ಲೇ ಇದ್ದರು. ಆಕಾಶ ಅವರು ಮುರ್ಡೇಶ್ವರ ಇಕ್ರಾ ಸ್ಕೂಲ್‌ನಲ್ಲಿ ಪ್ರಾಥಮಿಕ ಶಾಲೆಯನ್ನು ಓದಿದ್ದರು.
ನಂತರ ಭಟ್ಕಳ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಉಡುಪಿ ಕುಂದಾಪುರ ಕೋಟದ ವಿವೇಕ ಜೂನಿಯರ್ ಕಾಲೇಜ್‌ನಲ್ಲಿ ಪಿಯುಸಿ ಮಾಡಿದ್ದರು.
ಹಾಸನ ಮಲ್ನಾಡ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಮಾಡಿ ಬಿಟ್ಸ್ ಪಿಲ್ಲಾನಿಯಲ್ಲಿ ಡಿಸೈನ್ ಇಂಜಿನಿಯರಿಂಗ್ ನಲ್ಲಿ ಎಂಟೆಕ್ ಮುಗಿಸಿದ್ದಾರೆ.
ಚಂದ್ರಯಾನ-3 ಇಸ್ರೋ ಸಮಸ್ತ ವಿಜ್ಞಾನಿಗಳು, ಇಂಜಿನಿಯರ್‌ಗಳ ಗುಂಪಿನ ಒಗ್ಗಟ್ಟಿನ ಕಾರ್ಯನಿರ್ವಹಣೆಯ ಫಲ. ಹಿರಿಯ ಇಂಜಿನಿಯರ್‌ಗಳ ತಂಡದ ಜತೆ ಕಾರ್ಯನಿರ್ವಹಿಸಿದ ಖುಷಿ ಇದೆ. ದೇಶದ ಕೀರ್ತಿಯನ್ನು ಎತ್ತಿ ಹಿಡಿದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿರುವ ಹೆಮ್ಮೆ ಇದೆ. ಕೆಲಸ ಮಾಡುವಾಗ ಅಂಥ ವಿಶೇಷ ಅನಿಸುವುದಿಲ್ಲ. ಆದರೆ, ಯೋಜನೆ ಯಶಸ್ವಿಯಾದಾಗ, ಜನ ಗುರುತಿಸಿದಾಗ ಹೆಮ್ಮೆ ಎನಿಸುತ್ತದೆ.ಆಕಾಶ ಶೆಟ್ಟಿಪ್ರೊಜೆಕ್ಟ್ ಮ್ಯಾನೇಜರ್ ಇಸ್ರೋ ಸ್ಪೇಸ್‌ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್