ದ್ವಿತೀಯ ಪಿಯುಸಿ ಫಲಿತಾಂಶ: ನಾಲ್ಕನೇ ಸ್ಥಾನ ಉಳಿಸಿಕೊಂಡ ಉತ್ತರ ಕನ್ನಡ

PUC toppers
Published on

ಕಾರವಾರ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು,  ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಉಳಿಸಿಕೊಂಡೊದೆ. ಪರೀಕ್ಷೆಗೆ ಕುಳಿತ 13,236 ರಲ್ಲಿ 12,245  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.  92.51 ಫಲಿತಾಂಶ ಬಂದಿದೆ. 2023 ರಲ್ಲಿಯೂ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ, ಶೇ.89.74 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಉತ್ತೀರ್ಣರಾದವರ ಪ್ರಮಾಣ ಹೆಚ್ಚಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದ ಶೇ.90.31 ಅಭ್ಯರ್ಥಿಗಳು, ನಗರ ಪ್ರದೇಶದವರು ಶೇ.93.13 ವಿದ್ಯಾರ್ಥಿಗಳು ತೇಗಡೆ ಹೊಂದಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಶೇ.92.08, ವಿಜ್ಞಾನ ವಿಭಾಗದಲ್ಲಿ ಶೇ.95.14, ಕಲಾ ವಿಭಾಗದಲ್ಲಿ ಶೇ.89.09 ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ ಕುಮಟಾ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್‌ನ ಧ್ಯಾನ ರಾಮಚಂದ್ರ ಭಟ್ ಶೇ.99.16 ರಷ್ಟು ಅಂಕ ಪಡೆದು, ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದು, ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಶಿರಸಿ ಎಂಇಎಸ್ ಪಿಯು ಕಾಲೇಜ್‌ನ ಅಮಿತ್ ಹೆಗಡೆ (ಶೇ.98.83) ಜಿಲ್ಲೆಗೆ ದ್ವಿತೀಯ, ಎಂಇಎಸ್ ಚೈತನ್ಯ ಪಿಯು ಕಾಲೇಜ್‌ನ ರಮ್ಯಾ ಹೆಗಡೆ (ಶೇ.98.66) ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶಿರಸಿಯ ಚಂದನಾ ಪಿಯು ಕಾಲೇಜ್‌ನ ಸಿಂಚನಾ ಗಣಪತಿ ಹೆಗಡೆ ಶೇ.98.83 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಟಾ ಸರಸ್ವತಿ ಪಿಯು ಕಾಲೇಜ್‌ನ ಶ್ರಾವ್ಯಾ ಶ್ರೀಧರ ಭಟ್(ಶೇ.98.66) ಜಿಲ್ಲೆಗೆ ದ್ವಿತೀಯ, ಎಂಇಎಸ್ ಪಿಯು ಕಾಲೇಜ್‌ನ ಯಶಸ್ವಿನಿ ಎಸ್.ಹೆಗಡೆ ಹಾಗೂ ಸನ್ಮತಿ ಹೆಗಡೆ (ಶೇ. 98.5) ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಶಿರಸಿ ಕೊಳಗಿಬೀಸ್ ಪಿಯು ಕಾಲೇಜ್‌ನ ಅಂಕಿತಾ ಸತೀಶ ಹೆಗಡೆ (ಶೇ.97.66)ಪ್ರಥಮ, ಎಂಇಎಸ್‌ನ ದಿವ್ಯಾ ಎಸ್.ಗುನೇಕರ್ (ಶೇ.97.33) ದ್ವಿತೀಯ, ಮಾರಿಕಾಂಬಾ ಪಿಯು ಕಾಲೇಜ್‌ನ ಜೈಬಾ ಎಂ.ಮಿರ್ಚಿವಾಲೆ (ಶೇ.96.83) ತೃತೀಯ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net