

ದೇವದುರ್ಗ: ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ನಿವೃತ್ತ ಪಿಎಸ್‌ಐ ಹನುಮಂತ್ರಾಯ ಹೇಳಿದರು.
ಕೊಪ್ಪರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದಿಂದ ಹಮ್ಮಿಕೊಂಡಿದ್ದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ ಜ್ಯೋತಿ, ಪಿಂಚಣಿ, ಕಾರ್ಮಿಕರ ವಿಮೆ ಸೇರಿ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಈ ಯೋಜನೆಗಳಿಂದ ಗ್ರಾಹಕರಿಗೆ ಅನುಕೂಲವಾಗಲಿವೆ ಎಂದರು.
ಇದನ್ನೂ ಓದಿ: ಕುಟುಂಬದ ಭದ್ರತೆಗೆ ಇರಲಿ ವಿಮೆ
ಬ್ಯಾಂಕ್ ವ್ಯವಸ್ಥಾಪಕ ಓಂದೇವ್ ಮಾತನಾಡಿ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಆದರೆ, ಡಿಜಿಟಲ್ ವ್ಯವಸ್ಥೆಯಿಂದ ಆನ್‌ಲೈನ್ ವಂಚನೆ ಹೆಚ್ಚಾಗಿದ್ದು, ಗ್ರಾಹಕರು ಎಚ್ಚರಿಕೆಯಿಂದ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ನಡೆಸಬೇಕು. ಯಾರೊಂದಿಗೂ ಬ್ಯಾಂಕಿಂಗ್ ವ್ಯವಹಾರದ ಮಾಹಿತಿ ಹಂಚಿಕೊಳ್ಳಬಾರದು. ಎಟಿಎಂ ಪಿನ್, ಒಟಿಪಿ ಸೇರಿ ಗುಪ್ತ ಮಾಹಿತಿ ನೀಡಬಾರದು. ಗ್ರಾಹಕರು ಬ್ಯಾಂಕ್‌ನಿಂದ ಪಡೆದ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕು. ಇದರಿಂದ ಬ್ಯಾಂಕ್ ಬೆಳೆಯಲು ಸಾಧ್ಯವಿದೆ. ರುಪೇ ಕಾರ್ಡ್, ಕಿಸಾನ್ ಕಾರ್ಡ್ ಲಭ್ಯವಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಆರ್ಥಿಕ ಸಲಹೆಗಾರ ನಾಗನಗೌಡ, ಹನುಮಂತಪ್ಪ ಇತರರಿದ್ದರು.