ಕುಟುಂಬದ ಭದ್ರತೆಗೆ ಇರಲಿ ವಿಮೆ

10 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನಸಾಮಾನ್ಯರಿಗೆ ಸರಳ ಬ್ಯಾಂಕಿಂಗ್ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ತಿಳಿಸಲು ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳು ಉತ್ತಮ ವೇದಿಕೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಹಾಪ್ರಬಂಧಕ ಬಿ.ಸಿ. ರವಿಚಂದ್ರ ಹೇಳಿದರು.
ತಾಲೂಕಿನ ತೇಗೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಸಂತ್ರಸ್ತ ಆರು ಕುಟುಂಬಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಡಿ ತಲಾ 2 ಲಕ್ಷ ರೂ.ಗಳಂತೆ ಒಟ್ಟು 12 ಲಕ್ಷ ರೂ. ಚೆಕ್ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣದಲ್ಲಿ ಅನಕ್ಷರಸ್ಥರ ಸಂಖ್ಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಲೇ ಇರುವುದರಿಂದ ಆರ್ಥಿಕ ಸಾಕ್ಷರತೆ ನೀಡುವುದು ಅವಶ್ಯಕ. ಸಾಮಾಜಿಕ ಸುರಕ್ಷಾ ವಿಮಾ ಯೋಜನೆ ಬಡ ಜನರ ಅಭದ್ರತಾ ಭಾವನೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿಯೊಬ್ಬರೂ ಈ ಯೋಜನೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ನಬಾರ್ಡಿನ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಮಯೂರ ಕಾಂಬ್ಳೆ ಮಾತನಾಡಿ, ಕೃಷಿ ರಂಗದ ಧೀರ್ಘಾವಧಿ ಅಭಿವೃದ್ಧಿ ಗಮನಿಸಿ ನಬಾರ್ಡ್ ರೂಪಿಸಿರುವ ಯೋಜನೆಗಳನ್ನು ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಪಡೆಯಬೇಕು. ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಸ್ವ ಉದ್ಯೋಗದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಸಾಕಷ್ಟು ಆಯ್ಕೆಗಳಿದ್ದು, ತರಬೇತಿ ಮತ್ತು ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್‌ಗಳ ಸಹಾಯ ಪಡೆಯಬೇಕು ಎಂದರು.
ಕೆವಿಜಿಬಿ ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಮಾತನಾಡಿ, ವಿಮಾ ರಂಗದಲ್ಲಿ ಸಾಕಷ್ಟು ಬದಲಾವಣೆ ಮತ್ತು ಸರಳೀಕರಣವಾಗಿದ್ದರೂ ಜೀವ ವಿಮೆ ಇಂದಿಗೂ ಬಹುತೇಕರನ್ನು ತಲುಪಿಲ್ಲ. ನೈಸರ್ಗಿಕ ವಿಕೋಪ, ಅಪಘಾತ, ರೋಗಗಳಿಂದ ದುಡಿಯುವ ಕೈಗಳ ಸಾವು ಬಡ ಕುಟುಂಬಗಳನ್ನು ಅಧೀರರನ್ನಾಗಿಸುತ್ತವೆ. ಆಗ ಅವಲಂಬಿತರಿಗೆ ಜೀವ ವಿಮೆ ಆರ್ಥಿಕ ಭದ್ರತೆ ನೀಡಿ ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಹೀಗಾಗಿ ಪ್ರತಿ ವ್ಯಕ್ತಿ ಒಂದಿಲ್ಲೊಂದು ವಿಮೆ ಹೊಂದಿರುವುದು ಅವಶ್ಯಕ ಎಂದರು.
ಬ್ಯಾಂಕಿನ ತೇಗೂರು ಶಾಖಾ ವ್ಯವಸ್ಥಾಪಕ ರಾಘವೇಂದ್ರ ಚವ್ಹಾಣ, ಜಯಶ್ರೀ ಗಾಣೇಕರ, ಕಲಾವತಿ ಬೈಲೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net