ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ

9-kollegal-2,,
Published on

ಕೊಳ್ಳೇಗಾಲ: ಪಟ್ಟಣದ ಶ್ರೀವೆಂಕಟೇಶ್ವರ ಮಹಲ್‌ನಲ್ಲಿ ಮಂಗಳವಾರ ನಗರಸಭೆ ಆಡಳಿತ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ವಹಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿ ಮಾತನಾಡಿ, ಪೌರಕಾರ್ಮಿಕರ ಸೇವೆ ಬಹಳ ಗಣನೀಯವಾದುದು. ಆರೋಗ್ಯ ದೃಷ್ಟಿಯಿಂದ ಇವರ ಕಾರ್ಯವೈಖರಿ ಮಹತ್ವದಿಂದ ಕೂಡಿದೆ. ಸ್ವಚ್ಛತೆ ವಿಚಾರದಲ್ಲಿ ನಾಗರಿಕರೂ ನಮ್ಮ ಮನೆ, ನಮ್ಮ ಊರು, ನಮ್ಮ ನಗರ ಸ್ವಚ್ಛ ಇರಬೇಕೆಂಬ ಭಾವನೆ ಮೂಡಿಬಂದರೆ ಸಾಧ್ಯವಾದಷ್ಟು ಮಟ್ಟಿಗೆ ನಾವು ಕೂಡ ತೊಡಗಿಸಿಕೊಳ್ಳುವುದರಿಂದ ಸ್ವಚ್ಛತಾ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ. ನಾನು ಜರ್ಮನಿಗೆ ಪ್ರವಾಸ ಹೋಗಿದ್ದಾಗ ಸ್ವಚ್ಛತೆ ಬಗ್ಗೆ ಅಲ್ಲಿನ ಜನರ ಭಾವನೆ ಎಂತಹದ್ದು ಎಂಬ ಪಾಠವನ್ನು ಕಲಿಯುವಂತಾಯಿತು ಎಂದರು.


ಸರ್ಕಾರವೂ ಪೌರಕಾರ್ಮಿಕರ ಆರೋಗ್ಯ, ವಸತಿ ಸೌಕರ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವ ಕೊಡುತ್ತಾ ಬಂದಿದೆ. ಈ ಸೌಲಭ್ಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ನಿಮ್ಮ ಸಮಸ್ಯೆ ಏನೇ ಇದ್ದರೂ ನನ್ನಲ್ಲಿ ಮುಕ್ತವಾಗಿ ಬಂದು ತಿಳಿಸಬಹುದು ಎಂದರು. ಇದಕ್ಕೂ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಬಳಿಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವೆಂಕಟೇಶ್ವರ ಮಹಲ್‌ಗೆ ತಲುಪಿದರು.


ಈ ವೇಳೆ ಉತ್ತಮವಾಗಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಮಕ್ಕಳಿ ಪ್ರತಿಭಾ ಪುರಸ್ಕಾರ ನಡೆಸಿದರು. 44 ಮಂದಿ ಪೌರಕಾ ರ್ಮಿಕರಿಗೆ ವಿಶೇಷ ಭತ್ಯೆ ನೀಡಲಾಯಿತು.


ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರಾದ ರಾಘವೇಂದ್ರ, ಮನೋಹರ್, ಶಾಂತರಾಜು, ಕವಿತಾ, ಶಿವಕುಮಾರ್, ಭಾಗ್ಯಾ, ಸುಶೀಲಾ, ಸುರೇಶ್, ರಾಮಕೃಷ್ಣ, ಶಂಕರ್ ನಾರಾಯಣ್ ಗುಪ್ತ, ಪೌರಯುಕ್ತ ರಮೇಶ್, ಪರಿಸರ ಇಂಜಿನಿಯರ್ ಪ್ರಸನ್ನ, ಎಇಇ ಸುರೇಶ್, ಇಂಜಿನಿಯರ್ ನಾಗೇಂದ್ರ, ಸಮುದಾಯ ಸಂಘಟನಾಧಿಕಾರಿ ಪರಶಿವ, ಆರೋಗ್ಯ ನೀರಿಕ್ಷಕಿ ಭೂಮಿಕಾ, ಚೇತನ್, ಲಕ್ಷ್ಮೀ, ಹಾಗೂ ಪೌರಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net