

ಸೋಮವಾರಪೇಟೆ: ಸಣ್ಣಪುಟ್ಟ ಸಮಾಜಗಳು ಸಂಘಟನೆಯಾದರೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದೊರೇಶ್ ಹೇಳಿದರು.
ಇಲ್ಲಿನ ಸವಿತಾ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಚನಕಾರ ಹಡಪದ ಅಪ್ಪಣ್ಣ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಮಕ್ಕಳಿಗೆ ಇತಿಹಾಸ ತಿಳಿಸಬೇಕು. ಪದ್ದತಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. 2014ರಲ್ಲಿ ರಾಜ್ಯ ಸರ್ಕಾರದಿಂದ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಈ ನಿಗಮದ ಮೂಲಕ ಲಭಿಸುವ ಯೋಜನೆಗಳನ್ನು ಬಳಸಿಕೊಳ್ಳಬೇಕು. ಸ್ವ ಉದ್ಯೋಗ, ನೇರ ಸಾಲ ಯೋಜನೆ, ಸಹಾಯಧನದಂತಹ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಅಧ್ಯಕ್ಷೆ ಶರ್ಮಿಳಾ ರಮೇಶ್ ಮಾತನಾಡಿ, ಹಡಪದ ಅಪ್ಪಣ್ಣ ಅವರು 12ನೇ ಶತಮಾನದಲ್ಲಿ ಬಸವಾದಿ ಶರಣರೊಂದಿಗೆ ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದರು.
ಬಸವಣ್ಣ ಅವರ ನಿಕಟವರ್ತಿಯಾಗಿದ್ದ ಹಡಪದ ಅಪ್ಪಣ್ಣ ಅವರು 250ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆ, ಅಸ್ಪಶ್ಯತೆಯ ವಿರುದ್ಧ ಜಾಗೃತಿ ಮೂಡಿಸಿದರು. ಬಸವಣ್ಣ ಅವರ ಚಿಂತನೆಗಳೊಂದಿಗೆ ಸಾಮ್ಯತೆ ಹೊಂದಿದ್ದ ಅಪ್ಪಣ್ಣ ಅವರಿಗೆ ಅನುಭವ ಮಂಟಪದ ಮುಖ್ಯ ಹುದ್ದೆಯನ್ನೂ ನೀಡಲಾಗಿತ್ತು ಎಂದರು.
ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತನೆ ಹರಿಸುವ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ ಇಂತಹ ಮಹಾನ್ ಕ್ರಾಂತಿಕಾರಿಗಳ ಆದರ್ಶ ಹಾಗೂ ತತ್ವಗಳ ಅಧ್ಯಯನ ಮಾಡಬೇಕು. ಅವರ ಮಾರ್ಗದರ್ಶನದಂತೆ ನಡೆಯಬೇಕೆಂದು ಇದೇ ಸಂದರ್ಭ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಕಾಗಡಿಕಟ್ಟೆ ರಾಮಚಂದ್ರ, ಪಟ್ಟಣದ ಸಿದ್ದರಾಜು, ಮಂಜುನಾಥ್, ನಿಂಗರಾಜು, ಶರ್ಮಿಳಾ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅರುಣ್ ವಹಿಸಿದ್ದರು. ಉಪಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಮೋಹನ್, ಖಜಾಂಚಿ ಪಣೀಶ್, ಬಾಲಕೃಷ್ಣ ಇದ್ದರು.