

ಹಗರಿಬೊಮ್ಮನಹಳ್ಳಿ: ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಲ್ಲ ಎಂಬುದನ್ನು ಅಲ್ಬರ್ಟ್ ಐನ್‌ಸ್ಟೈನ್ ಎಂಬ ಮಹಾಜ್ಞಾನಿ ಜಗತ್ತಿಗೆ ಸಾಧಿಸಿ ತೋರಿಸಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಡಿ.ಅನುಪಮಾ ಹೇಳಿದರು.
ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ನಿಮಿತ್ತ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಗ್ರಾಪಂ ಹಾಗೂ ತಾಲೂಕು ವಕೀಲರ ಸಂಘ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಅಂಗವಿಕಲರಿಗೆ ಅಲ್ಬರ್ಟ್ ಐನ್‌ಸ್ಟೈನ್ ವಿಜ್ಞಾನಿ ಜೀವನ ಚರಿತ್ರೆ ಸದಾ ಸ್ಫೂರ್ತಿಯಾಗಲಿದೆ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ವಿಶೇಷವಾದ ಜ್ಞಾನ, ಕಲೆ, ಪ್ರತಿಭೆ ಇರುತ್ತದೆ. ಅದನ್ನು ಅರಿತು ನಿಗದಿತ ಗುರಿಯೊಂದಿಗೆ ಪರಿಶ್ರಮದ ಹಾದಿಯಲ್ಲಿ ಸಾಗಿದರೆ ಯಶಸ್ಸು ಸಿದ್ಧಿಯಾಗಲಿದೆ ಎಂದರು.
ಜಿಲ್ಲಾ ಅಂಗವಿಕಲರ ಸಮನ್ವಯ ಅಧಿಕಾರಿ ಕೃಷ್ಣ ಬಾಕಳೆ ಅವರು ಅಂಗವಿಕಲರ ಹಕ್ಕು ಮತ್ತು ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ತಾಪಂ ಇಒ ಜಿ.ಪರಮೇಶ್ವರ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ ತಳವಾರ, ವಕೀಲರ ಸಂಘದ ಅಧ್ಯಕ್ಷ ರಮೇಶ್ ಪೂಜಾರ್, ಸಿಡಿಪಿಒ ಅಧಿಕಾರಿ ಸುದೀಪ್ ಉಂಕಿ, ಆಯುಷ್ ವೈದ್ಯೆ ಅನುಷಾ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್.ಶ್ರೀನಿವಾಸ್, ವಕೀಲರಾದ ಕೊಟ್ರೇಶ್, ಬಸವರಾಜ, ನರೇಗಾ ಯೋಜನೆ ಎಡಿ ರಮೇಶ್ ಮಹಾಲಿಂಗಪುರ್, ಪಿಡಿಒ ಕೃಷ್ಣಮೂರ್ತಿ ಇದ್ದರು.