More

    ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ, ಮಹಿಳೆ ಸಾವು: ಪ್ರಾಣಾಪಾಯದಿಂದ ಪಾರಾದ ತಂದೆ,ಮಗು

    ಬೆಂಗಳೂರು: ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮಹಿಳೆ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟು, ಮಹಿಳೆಯ ಪತಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಡೆದಿದೆ.
    ಸಿಂಗಸಿಂದ್ರದ ಸೀಮಾ(೨೨) ಮೃತಪಟ್ಟವರು. ಆಕೆಯ ಪತಿ ಗುರುಮೂರ್ತಿ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಬುಧವಾರ ಸಂಜೆ ೬.೪೫ರ ಸುಮಾರಿಗೆ ಬೊಮ್ಮನಹಳ್ಳಿ ಕಡೆಯಿಂದ ನಗರದ ಕಡೆಗೆ ಬರುವಾಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯ ಅಪ್ಪರ್ ರಾಂಪ್‌ನಲ್ಲಿ ಈ ಘಟನೆ ನಡೆದಿದೆ.
    ಬಳ್ಳಾರಿ ಮೂಲದ ಗುರುಮೂರ್ತಿ ಅವರು ಸಿಗಸಂದ್ರ ಬೆಸ್ಕಾಂ ಕಚೇರಿಯಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಸಂಜೆ ಪತ್ನಿ ಸೀಮಾ ಹಾಗೂ ಮಗುವನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ನಗರದ ಕಡೆಗೆ ಬರುತ್ತಿದ್ದರು. ಈ ವೇಳೆ ಸಿಲ್ಕ್ ಬೋರ್ಡ್ ಜಂಕ್ಷನ್ ಅಪ್ಪರ್ ರಾಂಪ್‌ನಲ್ಲಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದ ಬಿಎಂಟಸಿ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ಗುರುಮೂರ್ತಿ ಹಾಗೂ ಮಗು ಎಡಭಾಗಕ್ಕೆ ಬಿದ್ದರೆ, ಪತ್ನಿ ಸೀಮಾ ಬಲ ಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಹಿಂಬದಿ ಚಕ್ರ ಸೀಮಾ ದೇಹದ ಮೇಲೆಯೇ ಹರಿದಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮೂರ್ತಿ ಮತ್ತು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಚಾಲಕ ವಶ:
    ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬಸ್‌ನ ಚಾಲಕನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts