

ಬನ್ನೂರು: ಹೋಟೆಲ್ ಮತ್ತು ಟೀ ಅಂಗಡಿಗಳಲ್ಲಿ ಆಹಾರ ತಯಾರಿಕೆ ಮತ್ತು ವಿತರಣೆಗೆ ಪ್ಲಾಸ್ಟಿಕ್ ಕವರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಸುಮಂತ್ ತಿಳಿಸಿದರು.
ಪಟ್ಟಣದ ಹೋಟೆಲ್ ಮತ್ತು ಟೀ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರ ತಯಾರಿಕಾ ಘಟಕಗಳನ್ನು ಪರಿಶೀಲಿಸಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದು ನೋಟಿಸ್ ಜಾರಿ ಮಾಡಿದ ಬಳಿಕ ಅವರು ಮಾತನಾಡಿದರು.
ಹಲವು ರೀತಿಯಲ್ಲಿ ಮನುಷ್ಯನ ಹೊಟ್ಟೆಗೆ ಪ್ಲಾಸ್ಟಿಕ್ ಸೇರುತ್ತಿದ್ದು, ಇದರಿಂದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಪಟ್ಟಣದ ಎಲ್ಲ ಹೋಟೆಲ್ ಸೇರಿ ಆಹಾರ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಜಾಗರೂಕರಾಗಬೇಕಾಗಿದ್ದು, ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ನಲ್ಲಿ ಪಡೆಯಬಾರದು. ಪ್ಲಾಸ್ಟಿಕ್ ಕವರ್‌ನಲ್ಲಿ ಇಡ್ಲಿ, ದೋಸೆ ಹಾಗೂ ಪ್ಲಾಸ್ಟಿಕ್ ಲೋಟದಲ್ಲಿ ಟೀ-ಕಾಫಿ ಕುಡಿಯುವುದನ್ನು ಬಿಡಬೇಕು. ಈ ಮೂಲಕ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುವುದನ್ನು ತಡೆಯಬಹುದು ಎಂದು ಹೇಳಿದರು.
ಪಟ್ಟಣದಲ್ಲಿರುವ ಹೋಟೆಲ್, ಫಾಸ್ಟ್ ಫುಡ್, ಟೀ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೆ ಪ್ರಾಸ್ಟಿಕ್ ಕವರ್ ಬಳಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.