ಉಪಯೋಗಕ್ಕಿಲ್ಲದ ಹೊಲಿಗೆ ಯಂತ್ರ! : ಕಳಪೆ ಗುಣಮಟ್ಟದ ಖರೀದಿಯಿಂದ ಲಕ್ಷಾಂತರ ರೂ. ವ್ಯರ್ಥ

New Project (17)
Published on

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ 2020-21ರ ಆರ್ಥಿಕ ವರ್ಷದಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತಿ ಮೀಸಲಿಟ್ಟ 4 ಲಕ್ಷ ರೂ. ಹಾಗೂ ಐಸಿಡಿಎಸ್ ವತಿಯಿಂದ ಮಂಜೂರಾದ 1 ಲಕ್ಷ ರೂ.ಗಳೊಂದಿಗೆ ಮಹಿಳಾ ಮೀಸಲಾತಿ ನಿಧಿಯಿಂದ ಸ್ವ ಉದ್ಯೋಗ ಹೊಲಿಗೆ ಘಟಕ ಸ್ಥಾಪನೆಗೆ ಕಳಪೆ ಹೊಲಿಗೆ ಯಂತ್ರಗಳನ್ನು ಖರೀದಿಸಿ ಅವುಗಳು ಉಪಯೋಗಕ್ಕೆ ಬಾರದೆ ಐಸಿಡಿಎಸ್ ಕಚೇರಿ ಕೊಠಡಿಯೊಳಗೆ ಮೂಲೆ ಸೇರಿವೆ. ಜನಪ್ರಿಯ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಯಂತ್ರಗಳನ್ನು ಖರೀದಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 2020ರಲ್ಲಿ ಅಧಿಕಾರಕ್ಕೇರಿದ ಆಡಳಿತ ಸಮಿತಿ ಕೂಡ ಈ ವಿಷಯವನ್ನು ಗೌಪ್ಯವಾಗಿಟ್ಟು ಮೌನ ಪಾಲಿಸಿರುವುದು ಹಲವು ರೀತಿಯ ಸಂಶಯಗಳನ್ನು ಹುಟ್ಟುಹಾಕಿದೆ. ಕಳಪೆ ಹೊಲಿಗೆ ಯಂತ್ರಗಳ ಬಗ್ಗೆ ಯಾವುದೇ ಚಕಾರ ಎತ್ತದ ಗ್ರಾಮ ಪಂಚಾಯಿತಿ ಹಾಗೂ ಐಸಿಡಿಎಸ್ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.. ಯೋಜನೆಯ ಉದ್ದೇಶವಾದ ಮಹಿಳಾ ಉದ್ಯೋಗ ಕಲ್ಪನೆಯಲ್ಲಿಯೇ ವಿಫಲವಾಗಿದೆ. ಯಂತ್ರಗಳ ಬಳಕೆ ಇಲ್ಲದೆ ಸ್ಥಳೀಯ ಮಹಿಳೆಯರು ಯಾವುದೇ ತರಬೇತಿ ಅಥವಾ ಉದ್ಯೋಗ ಪಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಇದೀಗ ಅಧಿಕಾರದಲ್ಲಿರುವ ಐಸಿಡಿಎಸ್ ಅಧಿಕಾರಿಗಳೂ ನಿರ್ಲಕ್ಷ್ಯ ಮಾಡಿರುವುದು ಸಾರ್ವಜನಿಕ ವಲಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ತನಿಖೆಗೆ ಆಗ್ರಹ ಈ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು. ಜಿಲ್ಲೆಯ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ಸಂಪೂರ್ಣ ಲೆಕ್ಕಪತ್ರಗಳ ಪರಿಶೀಲನೆ ನಡೆಸಬೇಕು. ಇದಕ್ಕೆ ಹೊಣೆಗಾರರಾಗಿರುವ ಗ್ರಾಮ ಪಂಚಾಯಿತಿ ಹಾಗೂ ಐ.ಸಿ.ಡಿ.ಎಸ್. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಟೈಲರಿಂಗ್ ಉದ್ಯಮ ಆರಂಭಿಸಲು ನಾನು ನಾಲ್ಕು ಲಕ್ಷ ರೂ. ಯೋಜನೆ ತಯಾರಿಸಿ ಕೊಟ್ಟಿದ್ದೆ. ಅದರಲ್ಲಿ ಉತ್ತಮ ಗುಣಮಟ್ಟದ 10 ಹೈಸ್ಪೀಡ್ ಹೊಲಿಗೆ ಯಂತ್ರಕ್ಕೆ ಬೇಡಿಕೆ ಇಡಲಾಗಿತ್ತು. ಅದರೆ ನಮಗೆ ಕಳಪೆ50 ಹೊಲಿಗೆ ಯಂತ್ರಗಳನ್ನು ತಂದುಕೊಟ್ಟಿದ್ದಾರೆ. ಇದು ಯಾವುದೂ ಕೆಲಸಕ್ಕೆ ಬಾರದ ಯಂತ್ರಗಳಾಗಿವೆ. ದುರಸ್ತಿ ಮಾಡಿದರೂ ಉಪಯೋಗಿಸಲು ಸಾಧ್ಯವಾಗಿಲ್ಲ. 5 ಲಕ್ಷ ರೂ. ವ್ಯರ್ಥವಾಗಿದೆ. ರೋಹಿಣಿ, ಉಪಾಧ್ಯಕ್ಷರು, ಮಂಜೇಶ್ವರ ಐ.ಸಿ.ಡಿ.ಎಸ್. ನಮ್ಮ ಗಮನಕ್ಕೆ ಈ ವಿಷಯ ಬಂದಾಗ ನಾವು ಪಂಚಾಯಿತಿಯಿಂದ ಮಾಹಿತಿ ಪಡೆದಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಯಬೇಕು. ಜಬ್ಬಾರ್, ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net