ಪುತ್ತೂರು: ಕಂದಾಯ ಇಲಾಖೆಯಲ್ಲಿ ಶೇ.೭ರಷ್ಟು ಮಾತ್ರ ಅಧಿಕಾರಿಗಳ ವರ್ಗಾವಣೆ ಮಾಡಬಹುದು. ಗ್ರಾಮಕರಣಿಕರನ್ನು ಆಂತರಿಕವಾಗಿ ವರ್ಗಾವಣೆಗೆ ಅಧಿಕಾರವಿದ್ದು, ಬೇರೆ ತಾಲೂಕಿನಿಂದ ಬಂದವರಿಗೆ ಜಾಗಗಳನ್ನು ನೀಡುವ ಕಾರ್ಯ ಕೆಲವೇ ದಿನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುಡಾ ಕಚೇರಿಯಲ್ಲಿ ಅಧಿಕಾರಿಯ ಸಹಿ ಫೋರ್ಜರಿ ವಿಚಾರದಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿಲ್ಲ. ಸಹಿ ಫೋರ್ಜರಿ ವಿಚಾರದಲ್ಲಿ ವಿಪಕ್ಷದವರೊಬ್ಬರ ಕೈವಾಡವಿದೆ. ಸಹಿ ಮಾಡಲು ಇಟ್ಟ ಕಡತ ತೆಗೆದುಕೊಂಡು ಹೋಗಿದ್ದು, ಜವಾಬ್ದಾಯುತ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಕಡತಕ್ಕೆ ಚಲನ್ ಪಾವತಿಸಿದ ಬಗ್ಗೆ ಮಾಹಿತಿಯಿಲ್ಲ. ಆ ರೀತಿಯಿದ್ದರೆ ಅಧಿಕಾರಿಯ ಮೂಲಕ ಪ್ರಕರಣ ದಾಖಲಿಸಲಾಗುವುದು. ಫೋರ್ಜರಿ ವಿಚಾರ ಕ್ರಿಮಿನಲ್ ವಿಚಾರವಾಗಿದ್ದು, ಸರ್ಕಾರದಿಂದ ಯಾವುದೇ ಆದೇಶ ಮಾಡಿಲ್ಲ. ಪುಡಾ ಸಭೆಯನ್ನು ಕರೆದಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮಾಧ್ಯಮದವರಿಗೆ ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆ ಸದ್ಯ ಇರುವುದು ಕೇವಲ ೩ ಸೆಂಟ್ಸ್ ಜಾಗದಲ್ಲಿ. ಅದಕ್ಕೆ ಸೆಟ್‌ಬ್ಯಾಕ್ ಇಲ್ಲ, ತೆರಿಗೆ ಕಟ್ಟಿಲ್ಲ. ಯಾವನೋ ಒಬ್ಬ ಅಧಿಕಾರಿಯಲ್ಲಿ ಕೇಳಿ ಠಾಣೆ ವರ್ಗಾವಣೆ ಮಾಡುವುದಲ್ಲ. ಪೊಲೀಸ್ ಠಾಣೆಗೆ ಈಗಾಗಲೇ ಗೃಹಸಚಿವರಲ್ಲಿ ಮಾತುಕತೆ ನಡೆಸಿಯೇ ಜಾಗವನ್ನು ಕಾಯ್ದಿರಿಸಲಾಗಿದೆ. ಅವರು ಅಲ್ಲಿಗೆ ಹೋಗಬೇಕು ಎಂದರು.
ಈಶ್ವರಮಂಗಲ ದೇವಸ್ಥಾನದಲ್ಲಿ ಅಳವಡಿಸಿದ ಸ್ಕ್ಯಾನರ್ ಅರ್ಚಕರಿಗೆ ಸೇರಿದ್ದು, ಅವರಿಗೆ ದೇವಾಲಯದಿಂದ ೬ ಸಾವಿರ ರೂ. ವೇತನ ನೀಡಲಾಗುತ್ತಿದೆ. ಕೆಲವು ವ್ಯಕ್ತಿಗಳಿಂದ ಈ ಸ್ಕ್ಯಾನರ್ ಮೂಲಕ ಹಣ ಪಡೆದಿದ್ದಾರೆಂದು ತಿಳಿಸಿದ್ದು, ಅದರಲ್ಲಿ ೧ ಸಾವಿರ ರೂ. ಬಂದಿದೆ ಎಂದು ಅವರು ತಿಳಿಸಿದ್ದಾರೆ. ಆಡಳಿತಾಧಿಕಾರಿ ಬೇರೆ ಕೆಲಸದ ಒತ್ತಡದಿಂದ ದೇವಸ್ಥಾನಕ್ಕೆ ತೆರಳಲು ಸಾಧ್ಯವಾಗದಿರಬಹುದು ಎಂದರು.
ತಹಸೀಲ್ದಾರ್‌ಗೆ ಆರೋಗ್ಯ ಸರಿಯಿಲ್ಲ
ತಹಸೀಲ್ದಾರ್ ಆರೋಗ್ಯ ಸರಿಯಿಲ್ಲ ಎಂಬ ಕಾರಣದಿಂದ ರಜೆಯನ್ನು ಹಾಕಿದ್ದು, ಕರೆ ಮಾಡಿದಾಗ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ. ಲೊಕಾಯುಕ್ತದಲ್ಲಿ ಲಂಚ ಸ್ವೀಕಾರ ಮಾಡಿದಾತ ತಹಸೀಲ್ದಾರ್ ಹೆಸರು ಉಲ್ಲೇಖಿಸಿದ್ದಾರೆ ಹೊರತು ತಹಸೀಲ್ದಾರ್ ಮೇಲೆ ಪ್ರಕರಣ ದಾಖಲಾಗಿಲ್ಲ. ಪುತ್ತೂರಿನಲ್ಲಿ ಲಂಚಕೋರರು ಇದ್ದು, ಇನ್ನಿರುವ ಭ್ರಷ್ಟರನ್ನು ನಾವೇ ಲೋಕಾಯುಕ್ತಕ್ಕೆ ಹಿಡಿದುಕೊಡುವ ಕಾರ್ಯ ಮಾಡಲಾಗುವುದು ಎಂದು ಅಶೋಕ್ ರೈ ಹೇಳಿದರು.