

ಸಿದ್ದಾಪುರ: ಆದಿವಾಸಿಗಳ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಸರ್ಕಾರದಿಂದ ಸಾಕಷ್ಟು ಯೋಜನೆಗಳಿದ್ದು, ಸಮುದಾಯದವರು ಸದುಪಯೋಗಪಡಿಸಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಾಡಿ ನಿವಾಸಿಗಳ ಆಶ್ರಯದಲ್ಲಿ ಫೆ.4, 5ರಂದು ನಡೆದ ಗಿರಿಜನ ಆಶ್ರಮ ಶಾಲೆಯ 60ನೇ ವಾರ್ಷಿಕೋತ್ಸವ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಕಾಡಂಚಿನಲ್ಲಿ ವಾಸವಾಗಿರುವ ಆದಿವಾಸಿಗಳ ಗ್ರಾಮಗಳನ್ನು ವಿವಿಧ ಯೋಜನೆಗಳ ಮೂಲಕ ಸರ್ಕಾರ ಅಭಿವೃದ್ಧಿಪಡಿಸುವ ಯೋಜನೆಗಳ ಕೈಗೊಂಡಿದೆ. ಮನೆ ಇಲ್ಲದವರಿಗೆ ಮನೆ ಕಲ್ಪಿಸುವ ಸಲುವಾಗಿ 483 ಮನೆಗಳ ನಿರ್ಮಾಣಮಾಡಲಾಗುತ್ತಿದೆ. ಹಲವು ವರ್ಷಗಳಿಂದ ವಿದ್ಯುತ್ ಬೆಳಕನ್ನೇ ಕಾಣದ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಮೂಲಕ ಕುಡಿಯುವ ನೀರು, ಶೌಚ ಗೃಹ ಕಲ್ಪಿಸಲಾಗುತ್ತಿದೆ ಎಂದರು.
ಹಾಡಿ ಮುಖಂಡರ ಬೇಡಿಕೆಯಂತೆ ಆಶ್ರಮ ಶಾಲೆಯ ಅಭಿವೃದ್ಧಿಗೆ 60 ಲಕ್ಷ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆದಿವಾಸಿ ಜನಾಂಗದವರು ದುಶ್ಚಟದಿಂದ ದೂರ ಉಳಿದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಆಶ್ರಮ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರದಿದ್ದವರ ಗಮನ ಸೆಳೆಯಿತು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎ. ಎಂ. ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್, ಅರಣ್ಯ ಅಧಿಕಾರಿ ಚೆನ್ನವಿರೇಶ್, ವನ್ಯ ಜೀವಿ ಛಾಯಾಗ್ರಾಹಕ ಕುಞಂಡ ಮಹೇಶ್ ಅಪ್ಪಯ್ಯ, ಮುಳಿಯ ವ್ಯವಸ್ಥಾಪಕ ಬಿ.ಎಸ್. ಕಿಶೋರ್, ಚೆನ್ನಯ್ಯನಕೋಟೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಬಿ. ಸಿ. ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕ ಸಿದ್ದಲಿಂಗ ಶೆಟ್ಟಿ, ಆದಿವಾಸಿ ಮುಖಂಡರಾದ ಜೆ.ಕೆ ರಾಮು, ಜೆ.ಕೆ ಅಪ್ಪಾಜಿ, ಜೆ.ಕೆ ಮುತ್ತಮ್ಮ, ಲಿಂಗಮ್ಮ, ಇಂದಿರಾ, ಶಂಕರ, ಧರ್ಮಜಾ ಉತ್ತಪ್ಪ, ಕರವಟೀರ ಬೆಲ್ಲು ಮೇದಪ್ಪ, ಮೂಡಗದ್ದೆ ಎಂ. ಕೆ. ಪೂಣಚ್ಚ, ರಾಕೇಶ್ ಸಾಗರ್ ಇತರರಿದ್ದರು.