ಅನುದಾನವನ್ನು ಸಮರ್ಪಕವಾಗಿ ಬಳಸಿ

Published on

ನಂಜನಗೂಡು: ನಂಜನಗೂಡು ತಾಲೂಕು ಪಂಚಾಯಿತಿಗೆ 2024-25ನೇ ಸಾಲಿಗೆ 166.49 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಅದನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಅಧಿಕಾರಿಗಳು ಅನುದಾನ ನಷ್ಟವಾಗದಂತೆ ನಿಗದಿತ ಕಾಲಮಿತಿಯೊಳಗೆ ಕ್ರಿಯಾಯೋಜನೆ ತಯಾರಿಸಿ ಸಮರ್ಪಕವಾಗಿ ಬಳಕೆ ಮಾಡುವಂತೆ ಕ್ರಮವಹಿಸಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ.ಕೃಷ್ಣರಾಜು ತಿಳಿಸಿದರು.


ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿ ಮಾತನಾಡಿದರು.
ಕಳೆದ ಬಾರಿ 154.53 ಕೋಟಿ ರೂ.ಅನುದಾನ ನಿಗದಿಯಾಗಿತ್ತು. ರಾಜ್ಯ ಹಾಗೂ ಕೇಂದ್ರ ವಲಯ ಕಾರ್ಯಕ್ರಮಗಳಲ್ಲಿ ಈ ಬಾರಿ 166.49 ಕೋಟಿ ರೂ.ಅನುದಾನ ಬಂದಿದೆ. ಅದನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಅಧಿಕಾರಿಗಳು ನಿಗದಿತ ಸಮಯದಲ್ಲಿ ಕ್ರಿಯಾಯೋಜನೆ ತಯಾರಿಸಿಕೊಂಡು ಅನುದಾನಗಳನ್ನು ಸಮಪರ್ಕವಾಗಿದೆ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.


ತಾಲೂಕಿನ ಇಬ್ಜಾಲ ಗ್ರಾಮದಲ್ಲಿ ಶಾಲಾ ಕಟ್ಟಡ ನೂತನವಾಗಿ ನಿರ್ಮಾಣಗೊಂಡಿದ್ದರೂ ಛಾವಣಿ ಸೋರಿಕೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಡಾ.ಕೃಷ್ಣರಾಜು, ಈ ಬಗ್ಗೆ ತನಿಖೆ ನಡೆಸಲು ಸೂಚಿಸುವುದಾಗಿ ತಿಳಿಸಿ ತಕ್ಷಣ ಕಟ್ಟಡ ರಿಪೇರಿ ಕಾರ್ಯ ನಡೆಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳ ತಂಡದೊಡನೆ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮವಹಿಸುವುದಾಗಿ ತಿಳಿಸಿದರು.


ಸಭೆಯಲ್ಲಿ ತಾ.ಪಂ.ಇಒ ಜೆರಾಲ್ಡ್ ರಾಜೇಶ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಅಧಿಕಾರಿ ಚಂದ್ರು, ರವಿಚಂದ್ರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net