

ಕನಕಗಿರಿ: ಗ್ರಾಮೀಣ ಪ್ರದೇಶದಲ್ಲಿ ಶೌಚಗೃಹಗಳ ಸ್ವಚ್ಛತೆಗಾಗಿ ತಾಪಂ, ಜಿಪಂ ಹಾಗೂ 15ನೇ ಹಣಕಾಸು ಯೋಜನೆ ಉಳಿಕೆ ಹಾಗೂ ಬಡ್ಡಿ ಹಣದಲ್ಲಿ ಖರೀದಿಯಾಗಿ ತಾಪಂಗೆ ಬಂದ ಸಕ್ಕಿಂಗ್ ಮಷಿನ್ ವಾಹನ ಒಂದು ಬಾರಿಯೂ ಬಳಕೆಯಾಗದೆ ಮೂಲೆ ಸೇರಿದೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೌಚಗೃಹಗಳ ನಿರ್ಮಾಣಕ್ಕೆ ಅನುದಾನ ದೊರೆತ ಬಳಿಕ ಸಾಕಷ್ಟು ವೈಯಕ್ತಿಕ ಶೌಚಗೃಹಗಳೂ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗಿವೆ. ಆದರೆ, ಶೌಚಗೃಹಗಳ ಸ್ವಚ್ಛತೆಗೆ ಸಕ್ಕಿಂಗ್ ಮಷಿನ್ ಅವಶ್ಯವಿತ್ತು. ಈ ಮಷಿನ್ ಖರೀದಿಸಲು ಸರ್ಕಾರದಿಂದ ಪ್ರತ್ಯೇಕ ಅನುದಾನವಿಲ್ಲವಾಗಿತ್ತು.
ಇದನ್ನು ಮನಗಂಡಿದ್ದ ಹಿಂದಿನ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ 2020-21, 2021-22ರ ತಾಪಂ, ಜಿಪಂ ಹಾಗೂ 15ನೇ ಹಣಕಾಸಿನ ಉಳಿಕೆ ಹಾಗೂ ಬಡ್ಡಿ ಹಣದಲ್ಲಿ 137.13 ಲಕ್ಷಗಳ ಕ್ರಿಯಾಯೋಜನೆ ತಯಾರಿಸಿ ಜಿಲ್ಲೆಯ 7 ತಾಲೂಕುಗಳಿಗೆ 4 ಸಾವಿರ ಲೀಟರ್.ನ ಜೆಮ್ ಆಧಾರದನ್ವಯ ಅನ್‌ಬ್ರಾಂಡೆಂಡ್ ಮಿಡಿಯಂ ಟ್ರಕ್ ಮೌಂಟ್ ಸಕ್ಕಿಂಗ್ ಮಷಿನ್ ಖರೀದಿಸಲು ಆಯುಕ್ತರ ಒಪ್ಪಿಗೆ ಪಡೆದಿದ್ದರು.
ಉತ್ತರ ಪ್ರದೇಶ ಮೂಲದ ಕಂಪನಿಯೊಂದು 1,34,19,000 ರೂ.ಗಳಿಗೆ ಬಿಡ್ ಮಾಡಿದೆ. 7 ತಾಲೂಕುಗಳಿಗೆ ತಲಾ 19,17,000 ರೂಪಾಯಿಗಳಿಗೆ ಸಕ್ಕಿಂಗ್ ಮಷಿನ್ ಸರಬರಾಜು ಮಾಡಿದೆ. ಆದರೆ, ಕೆಲ ತಾಲೂಕುಗಳಲ್ಲಿ ಈಗಾಗಲೇ ಮಷಿನ್ ಬಳಕೆ ಆರಂಭಗೊಂಡಿದ್ದರೆ, ತಾಲೂಕಿಗೆ ಮಂಜೂರಾಗಿ ಬಂದ ಸಕ್ಕಿಂಗ್ ಮಷಿನ್ ತಾಲೂಕು ಪಂಚಾಯಿತಿ ಕಚೇರಿಯ ಮೂಲೆಯಲ್ಲಿ ಗಿಡದ ಕೆಳಗೆ ನಿಂತು ಹಲವು ತಿಂಗಳುಗಳೇ ಗತಿಸಿದೆ.
ಈ ವಾಹನ ನಿಂತಲ್ಲಿ ಹೆಗ್ಗಣಗಳು ಸಾಕಷ್ಟಿದ್ದು, ಚಕ್ರದ ಕೆಳಗೆ ಗುಂಡಿ ತೋಡಿವೆ. ಸುತ್ತಲೂ ಗಿಡ ಗಂಟೆಗಳು ಬೆಳೆದಿದ್ದು, ವಾಹನ ದೂಳಿನಿಂದ ಮೆತ್ತಿದ್ದು, ಇದಕ್ಕೆ ಯಾವುದೇ ರಕ್ಷಣೆಯೂ ಇಲ್ಲವಾಗಿದೆ.
ಸಕ್ಕಿಂಗ್ ಮಷಿನ್ ನಿರ್ವಹಣೆಗೆ ಚಾಲಕರು ಹಾಗೂ ಸಿಬ್ಬಂದಿ ಅವಶ್ಯ. ಅದಕ್ಕಾಗಿ ತಾಪಂ ಹಾಗೂ ಸ್ಥಳೀಯ ಪಪಂ ಒಡಂಬಡಿಕೆ ಮಾಡಿಕೊಂಡಿದ್ದು, ಪಪಂನ ವಾಹನಗಳ ಚಾಲಕರೇ ಈ ವಾಹನ ಚಲಾಯಿಸಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಬಳಕೆಯಾಗುವುದರ ಜತೆಗೆ ಪಟ್ಟಣದಲ್ಲಿಯೂ ಸಾರ್ವಜನಿಕರು ನಿಗದಿಪಡಿಸಿದ ಹಣ ನೀಡಿ ಸಕ್ಕಿಂಗ್ ಮಷಿನ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ.
ತಾಪಂ-ಪಪಂ ನಡುವೆ ಒಡಂಬಡಿಕೆ?
ಗ್ರಾಮೀಣ ಭಾಗದಲ್ಲಿ ಶೌಚಗೃಹ ಸ್ವಚ್ಛ ಮಾಡಿದ್ದನ್ನು ಎಲ್ಲಿ ವಿಲೇವಾರಿ ಮಾಡಬೇಕು ಎನ್ನುವ ಪ್ರಶ್ನೆ ಅಧಿಕಾರಿ ವರ್ಗವನ್ನು ಕಾಡತೊಡಗಿದ್ದು, ಇದರಿಂದಾಗಿ ಕಳೆದ ಏಳೆಂಟು ತಿಂಗಳ ಹಿಂದೆಯೇ ಬಂದ ಸಕ್ಕಿಂಗ್ ಮಷಿನ್ ಬಳಕೆಯಾಗದೇ ಮೂಲೆ ಸೇರಿದೆ.
ವಿಲೇವಾರಿಯದ್ದೇ ಸಮಸ್ಯೆ
ತಾಪಂ ಇಒ ಕನಕಗಿರಿರಾಜಶೇಖರ ಕೆ.ಶೌಚಗೃಹ ಗುಂಡಿ ಸ್ವಚ್ಛಗೊಳಿಸಿದ್ದನ್ನು ವಿಲೇವಾರಿ ಮಾಡಲು ತೊಂದರೆಯಿದೆ. ಇನ್ನೆರಡು ತಿಂಗಳಲ್ಲಿ ಪಪಂನ ವಿಲೇವಾರಿ ಘಟಕ ಸಿದ್ದವಾಗಲಿದ್ದು, ಅಲ್ಲಿಗೆ ಡಂಪ್ ಮಾಡಲಾಗುವುದು. ಪಪಂನವರೊಂದಿಗೆ ಎಂಒಯು ಮಾಡಿಕೊಳ್ಳಲು ಚರ್ಚಿಸಲಾಗಿದ್ದು, ಶೀಘ್ರವೇ ಸಕ್ಕಿಂಗ್ ಮಷಿನ್ ಆರಂಭಕ್ಕೆ ಕ್ರಮವಹಿಸಲಾಗುವುದು. ಮುಖ್ಯಾಧಿಕಾರಿ ಪಪಂ ಕನಕಗಿರಿಲಕ್ಷ್ಮಣ ಕಟ್ಟಿಮನಿಹೊಸದಾಗಿ ಬಂದಿದ್ದು, ತಾಪಂನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯಿಲ್ಲ. ತಾಪಂ ಇಒರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.