ಉತ್ತಮ ಇಳುವರಿಗೆ ಸಾವಯವ ಗೊಬ್ಬರ ಬಳಸಿ

HUN-OCT-9-1(BALE KSHETROTSAVA)
ಹುಣಸೂರು ತಾಲೂಕು ಆಸ್ಪತ್ರೆ ಕಾವಲ್ ಗ್ರಾಮದಲ್ಲಿ ವಿಠಲ್‌ರಾವ್ ಖರಾಡೆ ಬಾಳೆ ತೋಟದಲ್ಲಿ ಬಾಳೆ ಬೆಳೆ ಕ್ಷೇತ್ರೋತ್ಸವ ನಡೆಯಿತು. ಡಾ.ನಾಗರಾಜ್, ಡಾ.ಮನುಕುಮಾರ್, ನಾಗೇಶ್‌ರಾವ್ ಮಂಗಾಣೆ, ಮುಜೀಬ್, ತುಳಸಿರಾವ್ ಇತರರಿದ್ದರು.
Published on

ಹುಣಸೂರು: ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕಿನ ಆಸ್ಪತ್ರೆ ಕಾವಲ್ ಗ್ರಾಮದಲ್ಲಿ ಬಾಳೆ ಬೆಳೆ ಕ್ಷೇತ್ರೋತ್ಸವ ನಡೆಯಿತು.

ಗ್ರಾಮದ ವಿಠಲ್‌ರಾವ್ ಖರಾಡರ ಜಮೀನಿನಲ್ಲಿ ಗುರುವಾರ ಆಯೋಜಿಸಿದ್ದ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಹಣ್ಣಿನ ತಜ್ಞ ಡಾ.ಮನುಕುಮಾರ್, ಬಾಳೆ ಕೃಷಿಯಲ್ಲಿ ಸಾವಯವ ಮತ್ತು ಜೈವಿಕ ಗೊಬ್ಬರಗಳ ಬಳಕೆಯಿಂದ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿ ಗಳಿಸಲು ಸಾಧ್ಯವಿದೆ. ಮುಖ್ಯವಾಗಿ ಬಾಳೆ ಬೆಳೆಯುವ ಮುನ್ನ ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ನಡೆಸಿ ಅದಕ್ಕೆ ತಕ್ಕ ತಳಿ ಮತ್ತು ಗೊಬ್ಬರಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದರು.

ರೋಗಬಾಧೆ ನಿಯಂತ್ರಣ ಹೇಗೆ?:  ಬಾಳೆ ಬೆಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕಾಂಟೆಕ್ಟ್ ಶಿಲೀಂದ್ರ ನಾಶಕಗಳಾದ ಮ್ಯಾಂಕೋಜೆಬ್-2 ಗ್ರಾಂ ಅಥವಾ ಕಾವರ್ ಆಕ್ಸಿಕ್ಲೋರೈಡ್ - 3 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಶೇ.1ರ ಪ್ರಮಾಣದ ಬೋಡೋ ದ್ರಾವಣವನ್ನು ಅಂಟು ಸೇರಿಸಿ ಸಿಂಪಡಿಸಬೇಕು. ರೋಗ ಬಂದ ನಂತರದಲ್ಲಿ ಅಂತರ್ ವ್ಯಾಪಿ ಶಿಲೀಂದ್ರ ನಾಶಕಗಳಾದ ಹಕ್ಕೋ ಕೊನಬೋಲ್ 1 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 10 ದಿನಗಳ ಅಂತರದಲ್ಲಿ ಪರ್ಯಾಯವಾಗಿ ಕಾರ್ಬೆಂಡಾಜಿಮ್ ಮತ್ತು ಮ್ಯಾಂಕೋಜಿಬ್ 2 ಗ್ರಾಂ ಸಿಂಪಡಿಸಬೇಕು ಹಾಗೂ ಬಾಳೆ ಸ್ಪೆಷಲ್ ಅನ್ನು 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕೆಂದು ಸಲಹೆ ನೀಡಿದರು.

ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ 2000 ರಿಂದ 3000 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯನ್ನು ಬೆಳೆಯುತ್ತಿದ್ದು ಹವಾಮಾನ ವೈಪರಿತ್ಯದಿಂದ ರೋಗ ಮತ್ತು ಕೀಟ ಬಾಧೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಇಲಾಖೆಯನ್ನು ಸಂಪರ್ಕಿಸಿ ತಾಂತ್ರಿಕ ಸಲಹೆ ಪಡೆಯಬೇಕೆಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಸೌಲಭ್ಯಗಳಾದ ತಾಳೆ ಬೆಳೆ ಪ್ರದೇಶ ವಿಸ್ತರಣೆ, ಹನಿ ನೀರಾವರಿ ಎಲ್ಲ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡುವ ಕುರಿತು ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆ ಕಾವಲ್ ಗ್ರಾ.ಪಂ.ಅಧ್ಯಕ್ಷ ನಾಗೇಶ್‌ರಾವ್ ಮಂಗಾಣೆ, ಗ್ರಾ.ಪಂ.ಸದಸ್ಯರಾದ ಮುಜೀಬ್, ತುಳಸಿರಾವ್ ಪ್ರಗತಿಪರ ರೈತರಾದ ಚಿನ್ನರಾಜ, ಶಿವಲಿಂಗಪ್ಪ , ಸಂಜು ಖರಾಡೆ, ಅಧಿಕಾರಿಗಳಾದ ಎಚ್.ಎಸ್.ರವಿ, ಎಸ್.ಎ.ವಿತಿನ್, ವಿ.ಚೈತ್ರಾ, ಜಿ.ಕೆ ಫಯಾಜ್ ಪಾಷ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net