ಲಾಕ್​ಡೌನ್ ಸಡಿಲಿಕೆ ಪ್ರತೀಕಾರಕ್ಕೆ ಬಳಕೆ?: ಒಂದೇ ದಿನ ನಡೆಯಿತು ಮೂರು ಕೊಲೆ

Murder
Published on

ಬೆಂಗಳೂರು: ಲಾಕ್​ಡೌನ್ ನಿಯಮ ಸಡಿಲಿಕೆ ಹಾಗೂ ಮದ್ಯ ಮಾರಾಟ ಆರಂಭವಾದ ಬೆನ್ನಲ್ಲೇ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ (ಮೇ 6) ಆರ್.ಟಿ. ನಗರ, ರಾಮಮೂರ್ತಿನಗರ ಹಾಗೂ ಕೆಎಸ್​ಆರ್ ರೈಲು ನಿಲ್ದಾಣದಲ್ಲಿ ಮೂರು ಕೊಲೆ ಪ್ರಕರಣಗಳು ವರದಿಯಾಗಿವೆ.

ತಮಿಳುನಾಡು ಮೂಲದ ಆರ್.ಟಿ. ನಗರ ನಿವಾಸಿ ಕಿಶೋರ್ (28), ಬೋವಿ ಕಾಲನಿಯ ರಾಮಪ್ರಸಾದ್ (40), ಹಾಸನ ಮೂಲದ ಶ್ರೀನಿವಾಸ್ (23) ಬುಧವಾರ ಪ್ರತ್ಯೇಕ ಕಡೆ ಕೊಲೆಯಾದವರು. ಕೃತ್ಯ ಎಸಗಿದ ಮಠದಹಳ್ಳಿ ನಿವಾಸಿ ರಾಜೇಶ್, ನೇತಾ ಮತ್ತು ನಟೇಶ್ ಎಂಬುವರ ವಿರುದ್ಧ ಆರ್.ಟಿ. ನಗರ, ರಾಮಮೂರ್ತಿನಗರ ಹಾಗೂ ಸಿಟಿ ರೈಲ್ವೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಮಠದಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಕಿಶೋರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತನಾಗಿದ್ದ ರಾಜೇಶ್ ಹೋಟೆಲ್​ವೊಂದರಲ್ಲಿ ಬಾಣಸಿಗನಾಗಿದ್ದ. ಬುಧವಾರ (ಮೇ 6) ರಾತ್ರಿ ಕಿಶೋರ್ ಮನೆಗೆ ಮದ್ಯ ತೆಗೆದುಕೊಂಡು ಹೋಗಿದ್ದ. ಈ ವೇಳೆ ಇಬ್ಬರೂ ಪಾರ್ಟಿ ಮಾಡಿದ್ದರು.

ರಾತ್ರಿ 10 ಗಂಟೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ರಾಜೇಶ್ ಚೂರಿ ಯಿಂದ ಇರಿದು ಪರಾರಿಯಾಗಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರ್.ಟಿ. ನಗರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ.

ಕಿಶೋರ್​ನ ಎದೆ ಭಾಗಕ್ಕೆ ಚೂರಿ ಏಟು ತಗುಲಿದ್ದು, ಗಂಭೀರವಾಗಿ ಗಾಯ ಗೊಂಡು ರಕ್ತ ಮಡುವಿನಲ್ಲಿ ಬಿದ್ದಿದ್ದ. ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದ ಎಂಬುದು ಗೊತ್ತಾಗಿದೆ. ಪಾರ್ಟಿಯಲ್ಲಿ ರಾಜೇಶ್ ಜತೆ ಮತ್ತೆ ಕೆಲವರು ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ತಲೆಯನ್ನು ಗೋಡೆಗೆ ಗುದ್ದಿ ಹತ್ಯೆ: ಮತ್ತೊಂದು ಪ್ರಕರಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರಾಮಪ್ರಸಾದ್, ಬೋವಿ ಕಾಲನಿಯ 4ನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಕೆಲಸದ ವೇಳೆ ಪರಿಚಯವಾಗಿದ್ದ ನೇತಾ ಜತೆ ಸೇರಿ 4 ದಿನಗಳಿಂದ ಮದ್ಯ ಸೇವಿಸುತ್ತಿದ್ದ. ಬುಧವಾರ ರಾತ್ರಿ ಹೆಚ್ಚು ಮದ್ಯ ಸೇವಿಸಿ ರುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ರಾಮಪ್ರಸಾದ್​ತಲೆಯನ್ನು ಗೋಡೆಗೆ ಗುದ್ದಿದ ನೇತಾ ಪರಾರಿಯಾಗಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವಾಗ ಗಾಯಾಳು ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತು ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

ಕಲ್ಲಿನಿಂದ ಜಜ್ಜಿ ಕೊಲೆ

ಬುಧವಾರ ಮಧ್ಯಾಹ್ನ 2 ಗಂಟೆಯಲ್ಲಿ ಕೆಎಸ್​ಆರ್ ರೈಲು ನಿಲ್ದಾಣದ ದ್ವಿಚಕ್ರ ವಾಹನ ರ್ಪಾಂಗ್​ನಲ್ಲಿ ನಟೇಶ್ ಮತ್ತು ಶ್ರೀನಿವಾಸ್ ಎಂಬುವರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ವೇಳೆ ಆಕ್ರೋಶಗೊಂಡ ನಟೇಶ್, ಕಲ್ಲಿನಿಂದ ಶ್ರೀನಿವಾಸ್​ನ ತಲೆಗೆ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ವೇಳೆ ಶ್ರೀನಿವಾಸ್​ನ ಸ್ನೇಹಿತ ಸುರೇಶ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಸ್ನೇಹಿತರು. ಯಾವ ಕಾರಣಕ್ಕೆ ಗಲಾಟೆಯಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಎಂದು ಸಿಟಿ ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಪ್ರತೀಕಾರಕ್ಕೆ ಬಳಕೆ?

ಮೇ 4ರಿಂದ ಈವರೆಗೂ 7 ಕೊಲೆ, 1 ಕೊಲೆ ಯತ್ನ ಪ್ರಕರಣಗಳು ನಡೆದಿವೆ. ಅವುಗಳಲ್ಲಿ 6 ಕೊಲೆ ಹಾಗೂ 1 ಕೊಲೆ ಯತ್ನ ಪ್ರಕರಣಗಳು ಮದ್ಯ ಪಾರ್ಟಿ ಮಾಡುವಾಗ ಸ್ನೇಹಿತರ ನಡುವೆ ಗಲಾಟೆಯಾಗಿ ಸಂಭವಿಸಿವೆ. ಹಳೇ ದ್ವೇಷಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ರೌಡಿಗಳು ಲಾಕ್​ಡೌನ್ ಸಡಿಲಿಕೆ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಬಾಗಲಗುಂಟೆ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಪ್ರಕರಣಗಳ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net