ಕೆರೆಗಳ ಅಭಿವೃದ್ಧಿಗೆ ನರೇಗಾ ಅನುದಾನ ಬಳಸಿ

ಸಂಡೂರಿನ ತಾಪಂ ಸಭಾಗಣದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇದ್ದರು.
ಸಂಡೂರಿನ ತಾಪಂ ಸಭಾಗಣದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇದ್ದರು.
Published on

ಸಂಡೂರು: ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಸೀಟುಗಳ ಭರ್ತಿಗೆ 20 ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿರುವ ವಿಷಯ ತಿಳಿದಿದ್ದು, ಅಂಥವರು ತಿದ್ದಿಕೊಳ್ಳಬೇಕು ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಚೋರುನೂರು ವಸತಿ ಶಾಲೆಯ ಆಡುಗೆ ಕೋಣೆಯಲ್ಲಿ ಇಲಿ, ಹೆಗ್ಗಣದ ಹಾವಳಿಯಿದ್ದು, ಮಕ್ಕಳಿಗೆ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿ, ಕಿಟಕಿಗಳಿಗೆ ಪರದೆ ಹಾಕಿ ಬಾಗಿಲು ದುರಸ್ತಿ ಮಾಡಿಸಿ. ಮಕ್ಕಳಿಗೆ ಪೌಷ್ಟಿಕ ಆಹಾರ, ಶುದ್ಧ ಕುಡಿವ ನೀರು ಪೂರೈಸಬೇಕು. ಬಯೋ ಮೆಟ್ರಿಕ್ ಹಾಜರಾತಿ ತೋರಿಸಿ ಮೋಸ ಮಾಡಬೇಡಿ ಎಂದು ಎಚ್ಚರಿಸಿದರು.

ಬಂಡ್ರಿ ಮುರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಬಸವರಾಜ ಮಾತನಾಡಿ, ವಸತಿ ಶಾಲೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗಿದೆ. ಶಾಲೆಯಿಂದ 1.2 ಕಿಮೀ ದೂರದಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಸುತ್ತಲೂ ನಡೆಯುತ್ತಿರುವ ಗಣಿಗಾರಿಕೆಯಿಂದ ಅಂತರ್ಜಲ ಕುಸಿಯುತ್ತಿದೆ ಎಂದು ದೂರಿದರು.

ಸುಶೀಲಾನಗರದ ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಕೆ.ಎಸ್.ಕರ್ಜಗಿ ಮಾತನಾಡಿ, ಶಾಲೆ ಬಳಿ ಸರ್ಕಾರಿ ಬಸ್ ನಿಲ್ಲಿಸುವುದಿಲ್ಲ. ನಿಲ್ದಾಣ ಇಲ್ಲದ ಕಾರಣ ಮಳೆಗಾಲದಲ್ಲಿ ಪಾಲಕರು ಮಕ್ಕಳನ್ನು ನೋಡಲು ಬಂದಾಗ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಮಾತನಾಡಿ, ವಡ್ಡು ಸೇರಿದಂತೆ ವಿವಿಧ ಗ್ರಾಪಂಗಳಲ್ಲಿ ಚರಂಡಿಗಳ ಮೇಲೆ ಶೌಚಗೃಹ, ಮನೆಗಳನ್ನು ಕಟ್ಟಿ ಒತ್ತುವರಿ ಮಾಡಿದವರಿಗೆ ಒಂದು ವಾರದೊಳಗೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿ. ಮಾಡದಿದ್ದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಿ ಎಂದು ಪಿಡಿಒಗಳಿಗೆ ಸೂಚಿಸಿದರು.

ಶಾಸಕಿ ಅನ್ನಪೂರ್ಣ ತುಕಾರಾಮ್ ಪ್ರತಿಕ್ರಿಯಿಸಿ, ಬಂಡ್ರಿ ಮುರಾರ್ಜಿ ವಸತಿ ಶಾಲೆ ಬಳಿ ಬ್ಲಾಸ್ಟಿಂಗ್ ನಿಯಂತ್ರಿಸಿ ಅಂತರ್ಜಲ ಇರುವುದನ್ನು ಗುರುತಿಸಿ ಬೋರ್ ಕೊರೆಸಲಾಗುವುದು. ಸುಶೀಲಾನಗರ ಶಾಲೆ ಬಳಿ ಬಸ್ ನಿಲ್ಲಿಸುವಂತೆ ಡಿಪೋ ವ್ಯವಸ್ಥಾಪಕ ವೆಂಕಟೇಶಗೆ ಸೂಚಿಸಿದರು. ಶೀಘ್ರ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಕೆಲ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು 3ವರ್ಷವಾಗಿದ್ದು, ತ್ವರಿತವಾಗಿ ರಿಪೇರಿ ಮಾಡಿಸುವಂತೆ ಆರ್‌ಡಬ್ಲ್ಯುಎಸ್ ಎಇಇ ವಿನಾಯಕಗೆ ಸೂಚಿಸಿದರು. ಚೆಕ್‌ಡ್ಯಾಂ ನಿರ್ಮಾಣ, ಕೆರೆಗಳ ಅಭಿವೃದ್ಧಿಗೆ ನರೇಗಾ ಅನುದಾನ ಬಳಸಿಕೊಳ್ಳುವಂತೆ ಪಿಡಿಒಗಳಿಗೆ ತಿಳಿಸಿದರು. ಹೂಳೆತ್ತುವ ಜತೆ ಕೆರೆ ತುಂಬಿದಾಗ ಹರಿಯುವ ಕೋಡಿ ನೀರನ್ನು ಇಂಗಿಸಲೂ ಯೋಜನೆ ರೂಪಿಸಿ ಎಂದರು.

ತಾಲೂಕಿನ ದೇವಗಿರಿ, ಸುಬ್ರಾಯನಹಳ್ಳಿ ಸೇರಿ ವಿವಿಧೆಡೆಯಿಂದ ವಿದ್ಯುತ್ ವ್ಯತ್ಯಯದ ದೂರುಗಳಿದ್ದು, ಸಾರ್ವಜನಿಕರಿಗೆ ನಿರಂತರ ವಿದ್ಯುತ್ ನೀಡುವಂತೆ ಎಇಇ ಉಮೇಶ್ ಕುಮಾರ್‌ಗೆ ಸೂಚಿಸಿದರು. ಅಲ್ಲದೆ ಪಟ್ಟಣಕ್ಕೆ ನೀರೊದಗಿಸುವ ನಾರಿಹಳ್ಳದ ಘಟಕಕ್ಕೆ ವಿದ್ಯುತ್ ಬಳಕೆ ಬದಲು ಸೋಲಾರ್ ವಿದ್ಯುತ್ ಅಳವಡಿಕೊಳ್ಳುವಂತೆ ಶಾಸಕಿ ಸೂಚಿಸಿದರು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net