ಆಸ್ಪತ್ರೆಯಲ್ಲಿ ವೈದ್ಯರ ಕೊರತೆ : ಕೆಡಿಪಿ ಸದಸ್ಯ ಶಿವರಾಮ ರೈ ಆರೋಪ : ತ್ರೈಮಾಸಿಕ ಕೆಡಿಪಿ ಸಭೆ

10
Published on

ವಿಜಯವಾಣಿ ಸುದ್ದಿಜಾಲ ಕಡಬ

ಸುಬ್ರಹ್ಮಣ್ಯಕ್ಕೆ ಪ್ರತಿನಿತ್ಯ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಅಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಸುಬ್ರಹ್ಮಣ್ಯದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ದಿನದ 24 ಗಂಟೆ ವೈದ್ಯಕೀಯ ಸೇವೆ ಸಿಗುವಂತೆ ಕ್ರಮ ವಹಿಸಬೇಕು. ಶಾಸಕರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಒತ್ತಡ ತರಬೇಕು ಎಂದು ಕೆಡಿಪಿ ಸದಸ್ಯ ಶಿವರಾಮ ರೈ ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯಿತಿ, ಕಡಬ ತಾಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ತ್ರಿಮೂರ್ತಿ ಮಾತನಾಡಿ, ಈಗಾಗಲೇ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು.

ಕಡಬದಿಂದ ಪಿಜಕಳ ಪಾಲೋಳಿ ಸೇತುವೆ ಮಾರ್ಗವಾಗಿ ಎಡಮಂಗಲ ಮೂಲಕ ಸುಳ್ಯ, ಪುತ್ತೂರಿಗೆ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಕೆಡಿಪಿ ಸದಸ್ಯ ಅಶ್ರಫ್ ಶೇಡಿಗುಂಡಿ ಬೇಡಿಕೆ ಮುಂದಿಟ್ಟರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕಿ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಕೆಡಿಪಿ ಸದಸ್ಯರಾದ ಪದ್ಮನಾಭ ಸಿರಿಬಾಗಿಲು, ಉಷಾ ಜೋಯಿ ನೆಲ್ಯಾಡಿ, ಮೋನಪ್ಪ ಕೊಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು.

ಕೃಷಿ ರಕ್ಷಣೆಗೆ ಕ್ರಮ

ಬಿಳಿನೆಲೆ ಗ್ರಾಮದ ಚೇರು ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದು, ಶಾಲೆ ಕಟ್ಟಡ, ಕೃಷಿ ಭೂಮಿ ಇತ್ಯಾದಿ ಸೊತ್ತುಗಳ ರಕ್ಷಣೆಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಬಿಇಒ ಲೋಕೇಶ್ ಎಸ್.ಆರ್. ಅಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಎಸ್‌ಡಿಎಂಸಿ ಪದಾಧಿಕಾರಿಗಳು, ಸ್ಥಳೀಯ ಪ್ರಮುಖರ ಸಮಿತಿ ರಚಿಸಿ ಅವರ ಉಸ್ತುವಾರಿಯಲ್ಲಿ ಅಲ್ಲಿನ ಸೊತ್ತು ಮತ್ತು ಕೃಷಿ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಪ್ರಾಪ್ತರಿಂದ ವಾಹನ ಚಾಲನೆ

ಸುಬ್ರಹ್ಮಣ್ಯ ಸೇರಿದಂತೆ ತಾಲೂಕಿನೆಲ್ಲೆಡೆ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಗ್ರಾಪಂ., ಪೊಲೀಸ್ ಇಲಾಖೆ ಸೇರಿ ದಂಡ ವಿಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ನಿಯಂತ್ರಣ ಮಾಡಬೇಕು ಎಂದು ಶಿವರಾಮ ರೈ ಆಗ್ರಹಿಸಿದರು. ಅಪ್ರಾಪ್ತರು ವಾಹನ ಚಲಾಯಿಸಿ ಅಪಾಯ ತಂದುಕೊಳ್ಳುತ್ತಿರುವ ಬಗ್ಗೆ ಸಭೆೆಯ ಗಮನಸೆಳೆದ ಕೆಡಿಪಿ ಸದಸ್ಯ ಗಿರೀಶ್ ಇಚ್ಲಂಪಾಡಿ ಪೊಲೀಸರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಕಡಬ-ಪಂಜ ರಸ್ತೆ ದುರಸ್ತಿ

ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರನ್ನು ನೇಮಿಸಬೇಕು. ಕಡಬದಲ್ಲಿ ರಾತ್ರಿ ತಂಗುವ ಸರ್ಕಾರಿ ಬಸ್ ಚಾಲಕ, ನಿರ್ವಾಹಕರಿಗೆ ವಸತಿ ವ್ಯವಸ್ಥೆ ಮಾಡಬೇಕು. ಸಂಪೂರ್ಣ ನಾದುರಸ್ತಿಯಲ್ಲಿರುವ ಕಡಬ-ಪಂಜ ರಸ್ತೆಯ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗುಂಡ್ಯಕ್ಕೆ ಬರುವ ಸರ್ಕಾರಿ ಬಸ್ ದೇರಣೆ ತನಕ ಬರುವಂತೆ ವ್ಯವಸ್ಥೆ ಮಾಡಬೇಕು. ಪೆರಿಯಶಾಂತಿ ಪರಿಸರದಲ್ಲಿ ರಸ್ತೆ ಪಕ್ಕದಲ್ಲಿರುವ ಅಪಾಯಕಾರಿ ಮರ ತೆರವುಗೊಳಿಸಬೇಕು. ಮೊದಲಾದ ಬೇಡಿಕೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net