

ಚನ್ನರಾಯಪಟ್ಟಣ: ಬೆಳೆಗಳಿಗೆ ಹೆಚ್ಚಿನ ಯೂರಿಯಾ ಹಾಕಿ ಜಮೀನಿನ ಫಲವತ್ತತೆ ಕಡಿಮೆಯಾಗಿದೆ. ಯೂರಿಯಾ ನೀರಿಗೆ ಸೇರಿ ಜಲ ಕಲುಷಿತವಾಗುತ್ತಿದೆ. ಯೂರಿಯಾದ ಅಧಿಕ ಬಳಕೆಯಿಂದ ಇಂತಹ ಪರಿಣಾಮಗಳು ಆಗುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯೂರಿಯಾ ಬದಲಿಗೆ ನ್ಯಾನೋ ಯೂರಿಯಾ ಬಳಸಬೇಕಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಮೋಹನ್ ಕುಮಾರ್ ಹೇಳಿದರು.
ಕೃಷಿ ಇಲಾಖೆ ಚನ್ನರಾಯಪಟ್ಟಣ ಹಾಗೂ ಇಫ್ಕೊ ಸಂಸ್ಥೆ ಸಹಭಾಗಿತ್ವದಲ್ಲಿ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಆಲಗೋಡನಹಳ್ಳಿ ರೈತ ಮುಖಂಡ ರವಿಗೌಡಯ್ಯ ಅವರ ಜಮೀನಿನಲ್ಲಿ ಶುಕ್ರವಾರ ಮೆಕ್ಕೆಜೋಳಗಳಿಗೆ ನ್ಯಾನೋ ಯೂರಿಯಾವನ್ನು ಆತ್ಮ ಯೋಜನೆಯಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ನ್ಯಾನೋ ಯೂರಿಯಾ ಶೇ.4 ಸಾರಜನಕ ಹೊಂದಿದೆ . ನ್ಯಾನೋ ಡಿಎಪಿ ಶೇ.8 ಸಾರಜನಕ ಮತ್ತು ಶೇ.16 ರಂಜಕ ಹೊಂದಿದ್ದು, ಬೆಳೆಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುತ್ತದೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ.30ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ನ್ಯಾನೋ ಯೂರಿಯಾ/ಡಿಎಪಿಯನ್ನು ಡ್ರೋನ್ ಅಥವಾ ಸ್ಪ್ರೆಯರ್ ಮೂಲಕ ಸಿಂಪಡಿಸಿದರೆ ಶೇ.80ರಷ್ಟು ಬೆಳೆಗಳಿಗೆ ತಲುಪುತ್ತದೆ. ಬೆಳೆಗಳಿಗೆ ಅಗತ್ಯ ಸಾರಜನಕ ನೀಡುತ್ತದೆ. ಎಲೆಗಳ ಮೇಲೆ ಗೊಬ್ಬರ ಸಿಂಪಡಿಸುವುದರಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ. ಪೋಲಾಗುವಿಕೆ ಕಡಿಮೆಯಾಗುತ್ತದೆ. ಸಾಮಾನ್ಯ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಅನುಕೂಲವಾಗಲಿದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿಂದ ಅವುಗಳನ್ನು ಇತರೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪಡಿಸಬಹುದು ಎಂದರು.
ರೈತ ಮುಖಂಡ ರವಿ ಗೌಡಯ್ಯ ಮಾತನಾಡಿ ರೈತರಲ್ಲಿ ನ್ಯಾನೋ ಯೂರಿಯಾ ಬಳಕೆ ಕುರಿತು ಅರಿವಿನ ಅಗತ್ಯವಿದೆ ಎಂದು ಹೇಳಿದರು.
ಡ್ರೋನ್‌ಗೆ ಸಂಪರ್ಕಿಸಲ್ಪಟ್ಟ ಕ್ಯಾನ್‌ನಲ್ಲಿ 9 ಲೀ. ನೀರು ಮತ್ತು ಅರ್ಧ ಲೀಟರ್ ನ್ಯಾನೋ ಯೂರಿಯಾ ಮತ್ತು ಅರ್ಧ ಲೀಟರ್ ನ್ಯಾನೋ ಡಿಎಪಿ ಗೊಬ್ಬರ ಹಾಕಿ ಗೋವಿನ ಜೋಳದ ಬೆಳೆಗೆ ಸಿಂಪಡಿಸಲಾಯಿತು. ಉದಯಪುರ ಕೃಷಿ ಅಧಿಕಾರಿ ಪಲ್ಲವಿ, ಆತ್ಮ ತಾಂತ್ರಿಕ ಅಧಿಕಾರಿ ಶ್ರೀನಿವಾಸ್, ಇಫ್ಕೋ ಸಂಸ್ಥೆಯ ಪ್ರತಿನಿಧಿ ಪ್ರವೀಣ್, ರೈತನಾಯಕರಾದ ಶಂಕರಣ್ಣ, ಮೀಸೆ ಮಂಜಣ್ಣ ಸೇರಿದಂತೆ ಇತರರು ಇದ್ದರು