

ಹೊಳೆನರಸೀಪುರ: ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು. ಕೆಳ ಸ್ಥರದ ಬಡವರ ಸೇವೆ ಮಾಡುವುದಕ್ಕಾಗಿಯೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಿಮ್ಮಗಳ ಸೇವೆಗೆ ಸದಾ ನಾವು ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಪಟ್ಟಣ ಹಾಗೂ ಹಲವು ಗ್ರಾಮಗಳಲ್ಲಿ ಮಳೆಗೆ ಕುಸಿದು ಬಿದ್ದಿದ್ದ ಮನೆಗಳ ಮಾಲೀಕರಿಗೆ ಶನಿವಾರ ಚೆಕ್ ವಿತರಿಸುವ ವೇಳೆ ಸಾರ್ವಜನಿಕರು ಕೆಲ ಸಮಸ್ಯೆಗಳನ್ನು ಮುಂದಿಟ್ಟರು. ತಾಲೂಕಿನಲ್ಲಿ ಡೆಂೆ ವ್ಯಾಪಕವಾಗಿ ಹರಡುತ್ತಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ದೊಡ್ಡಹಳ್ಳಿ ಗ್ರಾಮದಲ್ಲೇ ಇಬ್ಬರು ಬಲಿಯಾಗಿದ್ದಾರೆ ಎಂದು ಸ್ಥಳೀಯರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದರು.
ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು. ಉತ್ತಮ ರಸ್ತೆಗಳು ನಿರ್ಮಾಣವಾಗಬೇಕು. ಮುಂದೆ ಜನಸಂಪರ್ಕ ಸಭೆ ನಡೆಸುತ್ತೇನೆ. ಮತ್ತೆ ದೂರುಗಳು ಬರಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರಿಗೆ ಸೂಚಿಸಿದರು. ಪಟ್ಟಣದ ನಿವಾಸಿ ಮಂಜುಳಾ ಮತ್ತು ತಾಯಮ್ಮ ಅವರು ತಮಗೆ ಗ್ಯಾರಂಟಿ ಹಣ, ವಿಧವಾ ವೇತನ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಕ್ರಮಕ್ಕೆ ನಿರ್ದೇಶನ ನೀಡಿದರು.
ಕಡವಿನ ಕೋಟೆ ಗ್ರಾಮದ ನಾಗಮ್ಮ, ಹೊಳೆನರಸೀಪುರ ಟೌನ್ ನಿವಾಸಿ ಮಂಜುಳಾ, ಹಳ್ಳಿಮೈಸೂರು ಹೋಬಳಿ ದೊಡ್ಡಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಹಿಂದಲಹಳ್ಳಿ ಗ್ರಾಮದ ದೊರೆಸ್ವಾಮಿ ಅವರ ಮನೆ ಹಾನಿಗೆ ತಲಾ 1.20 ಲಕ್ಷ ರೂ. ಪರಿಹಾರದ ಚೆಕ್, ಸಿಡಿಲು ಬಡಿದು ಹಸು ಮೃತಪಟ್ಟಿದ್ದ ಮಾಲೀಕ ರಂಗಸ್ವಾಮಿಗೆ 37 ಸಾವಿರ ರೂ.ಚೆಕ್ ವಿತರಿಸಿದರು.
ಡೆಂೆಗೆ ಬಲಿಯಾದ ದೊಡ್ಡಹಳ್ಳಿ ಗ್ರಾಮದ ಚಿರಂತ್ ಗೌಡ, ಸಮೃದ್ಧಿ, ಗೋಹಳ್ಳಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ಕುಶಾಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ.ಪಟೇಲ್, ಜಿಲ್ಲಾಧಿಕಾರಿ ಸತ್ಯಭಾಮಾ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜಿತಾ, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಸೋಮಶೇಖರ್, ಮಂಜುನಾಥ ಭಾಗವಹಿಸಿದ್ದರು.