

ಬೆಂಗಳೂರು : ಏಪ್ರಿಲ್ ತಿಂಗಳಲ್ಲಿ ಬಿಎಂಟಿಸಿಯ ಮಾಸಿಕ ಬಸ್ ಪಾಸ್ ಪಡೆದಿದ್ದು, ನೌಕರರ ಮುಷ್ಕರದಿಂದಾಗಿ ಮತ್ತು ನಂತರದ ಲಾಕ್ಡೌನ್ನಿಂದಾಗಿ ಬಳಸಲಾಗಿಲ್ಲ ಎಂದರೆ ಚಿಂತೆ ಬೇಡ. ನಾಳೆಯಿಂದ ಪುನರಾರಂಭಗೊಳ್ಳುತ್ತಿರುವ ಸಿಟಿ ಬಸ್ ಸೇವೆಯಲ್ಲಿ ಈ ಪಾಸ್ಗಳನ್ನು ಈಗಲೂ ಬಳಸಬಹುದಾಗಿದೆ.
ಹೌದು! ಏಪ್ರಿಲ್ ತಿಂಗಳಲ್ಲಿ ಪಡೆದ ಮಾಸಿಕ ಪಾಸ್ಗಳ ಮಾನ್ಯತಾ ಅವಧಿಯನ್ನು ಜುಲೈ 8 ರವರೆಗೆ ವಿಸ್ತರಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಏಪ್ರಿಲ್ನಲ್ಲಿ ನೀಡಲಾಗಿರುವ ಸಾಮಾನ್ಯ ಮಾಸಿಕ ಪಾಸ್ ಮತ್ತು ಹಿರಿಯ ನಾಗರೀಕರ ಮಾಸಿಕ ಪಾಸ್ಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ.
ಏಪ್ರಿಲ್ 7 ರಿಂದ 21 ರವರೆಗೆ ಬಸ್ ಚಾಲಕರ ಮುಷ್ಕರದಿಂದಾಗಿ ಬಸ್ ಸೇವೆ ವ್ಯತ್ಯಯಗೊಂಡಿತ್ತು. ಅದಕ್ಕಾಗಿ ಏಪ್ರಿಲ್ ಪಾಸ್ಗಳ ಅವಧಿಯನ್ನು ಮೇ 16 ರವರೆಗೆ ಈ ಮುನ್ನ ವಿಸ್ತರಿಸಲಾಗಿತ್ತು. ಆದರೆ ಏಪ್ರಿಲ್ 28 ರಿಂದ ಜೂನ್ 20 ರವರೆಗೆ ಕೋವಿಡ್ ನಿರ್ಬಂಧಗಳಿಂದಾಗಿ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ, ಈಗ ಮತ್ತೆ ಪಾಸ್ಗಳ ಅವಧಿಯನ್ನು ಜುಲೈ 8 ರವರೆಗೂ ವಿಸ್ತರಿಸಲಾಗಿದೆ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇಂದಿನ ಆದೇಶದಲ್ಲಿ ತಿಳಿಸಿದ್ದಾರೆ.