ಬ್ಯಾಪ್ಟಿಸ್ಟ್ ಆಸ್ಪತ್ರೆ ವೀಕ್ಷಣೆಗೆ ಉತ್ಸುಕರಾಗಿದ್ದಾರೆ ಯುಎಸ್​ಎಐಡಿ ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ

Veena Reddy_USAID India_Director
Published on

ಬೆಂಗಳೂರು: ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಿಸಲು ಯು.ಎಸ್. ಏಜೆನ್ಸಿ ಫಾರ್ ಇಂಟರ್​ನ್ಯಾಷನಲ್​ ಡೆವೆಲಪ್​ಮೆಂಟ್​ (ಯುಎಸ್​ಎಐಡಿ) ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಬ್ಯಾಪ್ಟಿಸ್ಟ್​ ಆಸ್ಪತ್ರೆಯಲ್ಲಿನ ಆಶಾ ಬೆಂಬಲಿತ ಜೀವನ ಮತ್ತು ಕಲಿಕೆ ಕೇಂದ್ರ ಹಾಗೂ ಮಹಿಳಾ-ಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆದಿದ್ದು, ಅದರಲ್ಲಿ ವರ್ಚುವಲ್​ ಆಗಿ ಭಾಗವಹಿಸಿದ ವೀಣಾ ರೆಡ್ಡಿ ಈ ವಿಷಯ ತಿಳಿಸಿದರು.
ಯುಎಸ್​ಎಐಡಿ ಎಂದು ಪ್ರಸಿದ್ಧವಾಗಿರುವ ಯುಎಸ್​ ಏಜೆನ್ಸಿ ಫಾರ್​ ಇಂಟರ್‌ನ್ಯಾಷನಲ್ ಡೆವೆಲಪ್‌ಮೆಂಟ್ ಸೇರಿ ಭಾರತದಲ್ಲಿನ ಯುಎಸ್​ ಮಿಷನ್ ಪರವಾಗಿ ವರ್ಚುವಲ್ ಆಗಿ ನಿಮ್ಮೊಂದಿಗೆ ಇರಲು ಸಾಧ್ಯವಾಗಿರುವುದು ಗೌರವದ ಸಂಗತಿ ಎಂಬುದಾಗಿ ಅವರು ಹೇಳಿದರು.

ಅಮೆರಿಕ ಸರ್ಕಾರದ ಪರವಾಗಿ ಯುಎಸ್​ಎಐಡಿ ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಭಾರತವು ದಕ್ಷಿಣ ಏಷ್ಯಾ ಹಾಗೂ ಜಾಗತಿಕವಾಗಿ ತನ್ನ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಮತ್ತು ನೇತಾರನಾಗಿ ಹೊರ ಹೊಮ್ಮಲು ಅನುವಾಗುವಂತೆ ಬೆಂಬಲ ನೀಡಲು ಬದ್ಧವಾಗಿದೆ.
ಭಾರತದಲ್ಲಿ ಯುಎಸ್​ಎಐಡಿ 1979ರಿಂದ ಆಶಾ ಕಾರ್ಯಕ್ರಮದಡಿಯಲ್ಲಿ ಒಟ್ಟು 28 ಮಿಲಿಯನ್ ಡಾಲರ್‌ ಮೊತ್ತಕ್ಕಿಂತಲೂ ವೆಚ್ಚ ಮಾಡಿದೆ. ಇಂದು ನಾವು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಆಶಾ ಬೆಂಬಲಿತ ಜೀವನ ಮತ್ತು ಕಲಿಕೆ ಕೇಂದ್ರ ಮತ್ತು ಮಹಿಳಾ ಮತ್ತುಮಕ್ಕಳ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟಿಸುತ್ತಿದ್ದೇವೆ. ಈ ಕೇಂದ್ರಗಳು ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಸೇವೆಗಳ ಲಭ್ಯತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿ, 100 ಹೆಚ್ಚುವರಿ ಹಾಸಿಗೆಗಳನ್ನು ಅಳವಡಿಸಿ 220ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ಒದಗಿಸಲಿದೆ ಎಂದು ವೀಣಾ ರೆಡ್ಡಿ ತಿಳಿಸಿದರು.

ಈ ಹೊಸ ಕೇಂದ್ರಗಳ ಭಾಗವಾಗಿ ಮೊಬೈಲ್ ಪೀಡಿಯಾಟ್ರಿಕ್ ಮತ್ತು ಸಾಂತ್ವನ ಆರೈಕೆ ಮತ್ತು ಸ್ಮಾರ್ಟ್ ತರಗತಿಗಳಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿದು ನನಗೆ ಬಹು ಸಂತಸವಾಗಿದೆ. ಭಾರತದ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇತ್ತೀಚಿನ ಆವಿಷ್ಕಾರಗಳು, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಯುಎಸ್​ಐಡಿನ ಉದ್ದೇಶದೊಂದಿಗೆ ಹೊಂದಿಕೆಯಾಗುತ್ತದೆ. ಬೇಲರ್ ವಿಶ್ವವಿದ್ಯಾನಿಲಯದೊಂದಿಗಿನ ನಮ್ಮ ನಿಕಟ ಪಾಲುದಾರಿಕೆ ಮತ್ತು ಸಹಯೋಗದಿಂದಲೇ ಇಂದಿನ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು.

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಡಾ. ಸ್ಪರ್ಜನ್ ಮತ್ತು ಬೇಲರ್ ವಿಶ್ವವಿದ್ಯಾನಿಲಯದ ಡಾ. ಗಾರ್ನರ್ ಅವರ ಸಮರ್ಥ ಮುಂದಾಳತ್ವದಿಂದ ಈ ಕಾರ್ಯಕ್ರಮ ಸಾಕಾರಗೊಂಡಿದೆ. ಆಸ್ಪತ್ರೆಯನ್ನು ಖುದ್ದಾಗಿ ನೋಡಲು, ಸಿಬ್ಬಂದಿಯೊಂದಿಗೆ ಮಾತನಾಡಲು ಮತ್ತು ಸೇವೆಗಳ ಉಪಯೋಗ ಮಾಡಿಕೊಳ್ಳುತ್ತಿರುವ ಜನರನ್ನು ಭೇಟಿಯಾಗಲು ಕಾತುರಳಾಗಿದ್ದೇನೆ. ಪ್ರಯಾಣ ಮತ್ತು ಸಭೆ ನಡೆಸಲು ಸುರಕ್ಷಿತ ಪರಿಸ್ಥಿತಿ ನಿರ್ಮಾಣವಾಗಿ ಈ ಭೇಟಿ ಸಾಧ್ಯವಾಗುವ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.

ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯು ಲಾಭದ ಉದ್ದೇಶವಿಲ್ಲದೇ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದ-ಭಾವವಿಲ್ಲದೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆ ಹೊಂದಿದೆ. ಅದರ ಮೌಲ್ಯಗಳು ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ ಯುಎಸ್​ಎಐಡಿ ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗಿವೆ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ಭಾರತದಲ್ಲಿ ಅರೋಗ್ಯ ಸೇವೆಗಳನ್ನು ಉತ್ತಮ ಪಡಿಸಲು ಸಂಶೋಧನೆ, ವಿದ್ಯಾರ್ಥಿವೇತನ ಮತ್ತು ಸಾಮರ್ಥ್ಯವರ್ಧನೆಗಳ ಮೂಲಕ ಬೇಲರ್ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಜತೆಯಾಗಿ ಬಹುಕಾಲದಿಂದ ಮಾಡುತ್ತಿರುವ ಕೆಲಸಗಳಿಗೆ ಯುಎಸ್​ಎಐಡಿ ಪ್ರಶಂಸೆ ವ್ಯಕ್ತಪಡಿಸುತ್ತದೆ ಎಂದೂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net