ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಸಾಗಿನಾವ ವಿವಿ ಸಿಬ್ಬಂದಿ ಭೇಟಿ

28-pnp 2
Published on

ಪಾಂಡವಪುರ: ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆಗೆ ಅಮೆರಿಕದ ಸಾಗಿನಾವ ವಿಶ್ವವಿದ್ಯಾಲಯದ ಡೀನ್, ಪ್ರೊಫೆಸರ್‌ಗಳು ಬುಧವಾರ ಭೇಟಿ ನೀಡಿದರು.


ವಿದ್ಯಾರ್ಥಿ ವಿನಿಮಯ ಒಪ್ಪಂದ ಹಿನ್ನೆಲೆಯಲ್ಲಿ ಆಗಮಿಸಿದ್ದ ಸಾಗಿನಾವ ವಿವಿ ಡೀನ್, ಪ್ರೊಫೆಸರ್‌ಗಳು ಶಾಲೆಯ ಗ್ರಂಥಾಲಯ, ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ಪ್ರಯೋಗಾಲಯ ವೀಕ್ಷಿಸಿದರು. ಸಹಪಠ್ಯ ಚಟುವಟಿಕೆಗಳಾದ ಈಜು, ಕರಾಟೆ, ಡ್ರಾಮಾ, ಸಂಗೀತ, ನೃತ್ಯ ಮುಂತಾದವುಗಳನ್ನು ವೀಕ್ಷಿಸಿ ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ನಂತರ ತರಗತಿಗಳಿಗೆ ಭೇಟಿ ನೀಡಿ ಶಿಕ್ಷಕರ ಬೋಧನಾ ವಿಧಾನವನ್ನು ವೀಕ್ಷಿಸಿ ಶಿಕ್ಷಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳೊಂದಿಗೆ ಕಲಿಕೆಯ ಬಗ್ಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸಹ ಅಮೆರಿಕ ಶಿಕ್ಷಣ ಪದ್ಧತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ನಂತರ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಬಳಿಕ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿಗೂ ಭೇಟಿ ನೀಡಿ ಅಲ್ಲಿನ ಕಲಿಕಾ ವಿಧಾನಗಳನ್ನು ವೀಕ್ಷಿಸಿದರು.


ಎಸ್‌ಟಿಜಿ ಶಾಲೆ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತವಾಗಿ ಕಲಿಕೆಗೆ ಪೂರಕವಾದ ಉತ್ತಮ ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಸಹಪಠ್ಯ ಚಟುವಟಿಕೆಗಳಿಗೂ ಮಹತ್ವ ನೀಡುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹೊಮ್ಮಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.


ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಉತ್ತಮ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಪಡೆದುಕೊಳ್ಳುವ ಜತೆಗೆ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿರುವ ಸಂಸ್ಥೆಯ ಅಧ್ಯಕ್ಷರೂ ಆದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಸಿಇಒ ಸಿ.ಪಿ.ಶಿವರಾಜು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ತನುಶ್ರೀ ಶಿವರಾಜು, ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಪ್ರಾಂಶುಪಾಲರಾದ ಮಾಚಮ್ಮ, ಟಿ.ಮಾರುತಿ, ನಿಶಾಂತ್ ಎ.ನಾಯ್ಡು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net