

ಗುಂಡ್ಲುಪೇಟೆ: ತಾಲೂಕಿನ ಹೊಸಪುರ ಸುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ದಾಳಿ ತಡೆಗಟ್ಟುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಮಂಗಳವಾರ ಅರಣ್ಯ ಇಲಾಖೆ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕು ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಹೊಸಪುರ ಕ್ಯಾಂಪ್‌ನಲ್ಲಿ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು ಓಂಕಾರ ಅರಣ್ಯ ವಲಯದ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಿಂಡಿನ ದಾಳಿಗೆ ರೈತರ ಜಮೀನುಗಳಲ್ಲಿ ಬೆಳೆದಿರುವ ಫಸಲುಗಳು ನಾಶವಾಗುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ಕಂದಕಗಳಲ್ಲಿ ಹೂಳೆತ್ತಿಸುವ ಕಾರ್ಯ ಆಗಬೇಕು. ಸೋಲಾರ್ ಬೇಲಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳುವರೆಗೆ ಪ್ರತಿಭಟನೆ ಹಿಂತೆಗೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಸ್ಥಳದಲೇ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿದರು.
ರೈತ ಸಂಘದ ಪದಾಧಿಕಾರಿಗಳಾದ ಮಹದೇವೇಗೌಡ, ಮರಿಸ್ವಾಮಿ, ಪುಟ್ಟೇಗೌಡ, ಪ್ರಸಾದ್, ಅಭಿ ಇತರರು ಇದ್ದರು.