

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಮಾರಿಪಳ್ಳದಿಂದ ಸುಜೀರು ದೈಯಡ್ಕೆ ಹೋಗುವ ರಸ್ತೆ ಹೊಂಡ ಹಾಗೂ ಕೆಸರಿನಿಂದ ತುಂಬಿ ಕೊಂಡಿದೆ. ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಳಭಾಗದಲ್ಲಿ ದೈಯ್ಯಡ್ಕಕ್ಕೆ ಹೋಗುವ ತಿರುವು ರಸ್ತೆಯ ಮೇಲ್ಭಾಗದಲ್ಲಿ ಖಾಸಗಿ ಜಾಗದವರು ರಸ್ತೆ ಬದಿ ಚರಂಡಿ ನಿರ್ಮಿಸಿದ್ದು ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಪುದು ಗ್ರಾಮ ಪಂಚಾಯಿತಿಗೆ ಕಳೆದ ವರ್ಷವೇ ಮನವಿ ನೀಡಿ ಚರಂಡಿ ಮುಚ್ಚಲು ಆಗ್ರಹಿಸಿದ್ದರೂ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
2 ವಾರದ ಹಿಂದೆ ಇದೇ ಸ್ಥಳದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಬಿದ್ದು ಪೆಟ್ಟಾಗಿತ್ತು. ಮಂಗಳೂರು ಶಾಸಕ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು ಇತ್ತ ಗಮನ ಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.