

ಅಲೆಮಾರಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಕೊಲೆಯಂತಹ ಗಂಭೀರ ವಿಚಾರಗಳ ಬಗ್ಗೆ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ವೇದಿಕೆಯ ನೇತೃತ್ವದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯು ಅಲೆಮಾರಿ ಸಮುದಾಯದ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಜು.9ರಂದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ತಾವರೆಕೆರೆಯಲ್ಲಿ ಅರುಣಾ ಎಂಬ ಶಿಳ್ಳೆಕ್ಯಾತ ಸಮುದಾಯದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಿ ಮೃತ ಬಾಲಕಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಮಾಜಿ ಸಂಸದರಾದ ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಎಸ್ಸಿ ವಿಭಾಗದ ಅಧ್ಯಕ್ಷರಾದ ಧರ್ಮಸೇನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್, ಹಿರಿಯ ಪತ್ರಕರ್ತರಾದ ಜಾಣಗೆರೆ ವೆಂಕಟರಾಮಯ್ಯ, ದಲಿತ ಸಾಹಿತಿಗಳಾದ ಡಾ. ವಡ್ಡಗೆರೆ ನಾಗರಾಜಯ್ಯ, ಡಾ. ಬಾಲಗುರುಮೂರ್ತಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಅಂಬಣ್ಣ ಆರೋಲಿಕರ, ಭೀಮಾಶಂಕರ್ ಹಾಗೂ ಅಲೆಮಾರಿ ಮುಖಂಡರಾದ ಶೇಷಪ್ಪ ಅಂದೋಲ್ ಮತ್ತಿತರರು ಅಲೆಮಾರಿಗಳ ರಕ್ಷಣೆ ಕುರಿತು ಸಲಹೆ, ಸೂಚನೆಗಳನ್ನು ಸಭೆಯಲ್ಲಿ ಮಂಡಿಸಿದರು.
ಸದ್ಯದಲ್ಲೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗವೊಂದನ್ನು ಒಯ್ದು, ಅಲೆಮಾರಿ ಸಮುದಾಯದವರ ಮೇಲೆ ರಾಜ್ಯದ ಅನೇಕ ಭಾಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಶೋಷಣೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ ಅಲೆಮಾರಿ ಸಮುದಾಯಗಳನ್ನು ಸಂಘಟಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಅದರ ಜೊತೆಗೆ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಕುಟುಂಬಗಳಿಗೆ ಸೂಕ್ತ ರೀತಿಯಲ್ಲಿ ಆರ್ಥಿಕ ನೆರವು, ಉದ್ಯೋಗ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಭೆಯಲ್ಲಿ ಅಲೆಮಾರಿ ಸಮುದಾಯದ ಮುಖಂಡರುಗಳಾದ ಜಾವಡೆ ಲೋಕೇಶ್, ಲೋಹಿತ್, ಕೆ. ವೀರೇಶ್, ಸುಭಾಷ್ ಚವ್ಹಾಣ್, ಶಾಂತರಾಜ್ ಮತ್ತಿತರರು ಪಾಲ್ಗೊಂಡಿದ್ದರು.