ವೀರಶೈವ ಸಮನ್ವಯ ತತ್ವ ವಿಶ್ವಕ್ಕೆ ಮಾದರಿ; ಶ್ರೀ ಉಜ್ಜಯಿನಿ ಜಗದ್ಗುರುಗಳ ಅಭಿಮತ

ujja
Published on

ಬೆಂಗಳೂರು: ಜಗತ್ತಿನಲ್ಲಿ ಹಲವು ಧರ್ಮ, ಜಾತಿ, ಮತ, ತತ್ವ, ಸಿದ್ಧಾಂತಗಳಿವೆ. ಆದರೆ ವೀರಶೈವ ಸಿದ್ಧಾಂತದಲ್ಲಿರುವ ಸಮನ್ವಯ ಮತ್ತು ಸಮಾನತೆಯ ತತ್ವ ಇಡೀ ವಿಶ್ವಕ್ಕೆ ಮಾದರಿ ಎಂದು ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.

ಬಸವನಗುಡಿ ನಿಜಗುಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ನ ವೀರಶೈವ ಮತಮಸ್ತಿ ಜಗತ್ರಯೆ’ ಎಂಬ ಉಕ್ತಿಯಂತೆ ವೀರಶೈವ ತತ್ವಕ್ಕೆ ಸರಿಸಮಾನವಾದ ಮತ್ತೊಂದು ತತ್ವ ಮೂರು ಲೋಕಕಗಳಲ್ಲೂ ಇಲ್ಲ ಎಂದು ಭಗವಂತನೇ ತಿಳಿಸಿದ್ದಾನೆ. ಯಾವುದೇ ಜಾತಿ, ಜನಾಂಗದಲ್ಲಿ ಹುಟ್ಟಿದ ವ್ಯಕ್ತಿಯಾದರೂ ಈ ಧರ್ಮದ ತತ್ವ, ಸಿದ್ಧಾಂತ, ನೀತಿ, ನಿಯಮಗಳನ್ನು ಒಪ್ಪಿ ಸ್ವೀಕರಿಸಲು ಅವಕಾಶವಿದೆ. ಇಷ್ಟಲಿಂಗವನ್ನು ದೇವಾನು ದೇವತೆಗಳೆಲ್ಲರೂ ಪೂಜಿಸಿದ್ದಾರೆ. ಅಂತಹ ಪವಿತ್ರ ಇಷ್ಟಲಿಂಗವನ್ನು ಕರಕಮಕ್ಕೆ ತಂದು ಕೊಟ್ಟವರು ಜಗದ್ಗುರು ಪಂಚಾಚಾರ್ಯರು. ಪರಶಿವನ ಚೈತನ್ಯ ಶಕ್ತಿ ಇರುವ ಇಷ್ಟಲಿಂಗ ಪೂಜೆಯನ್ನು ನಿತ್ಯ ಮಾಡುವುದರಿಂದ ತಮ್ಮೆಲ್ಲ ಇಷ್ಟಾರ್ಥಗಳು ಈಡೇರುವುದರ ಜೊತೆಗೆ ದೇಹವು ಪಾಳು ದೇಗುಲವಾಗುವ ಬದಲು ಶಿವನ ಆಲಯವಾಗಲಿದೆ. ಇಂತಹ ಇಷ್ಟಲಿಂಗ ಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ಭಕ್ತರಿಗೆ ತಿಳಿಸಿಕೊಡುವುದಕ್ಕಾಗಿಯೇ ರಂಭಾಪುರಿ ಜಗದ್ಗುರು ಶ್ರೀವೀರಗಂಗಾಧರ ಭಗವತ್ಪಾದರು ಆರಂಭಿಸಿದ ಸಾಮೂಹಿಕ ಇಷ್ಟಲಿಂಗ ಪೂಜೆ ಇಂದು ಪಂಚಪೀಠದ ಎಲ್ಲ ಜಗದ್ಗುರುಗಳು ಮುಂದುವರೆಸಿದ್ದಾರೆ ಎಂದು ಜಗದ್ಗುರುಗಳು ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಜಾಪುರದ ಶ್ರೀ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರದ ಶ್ರೀತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಕಲ್ಲುಬಾಳು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪೂಜಾ ಸಮಿತಿಯ ಅಧ್ಯಕ್ಷ ಷಡಕ್ಷರಿ ಶಾಸ್ತ್ರಿಗಳು, ಉಪಾಧ್ಯಕ್ಷರಾದ ಶಿವಶಂಕರ ಶಾಸ್ತ್ರಿಗಳು, ಕಾರ್ಯದರ್ಶಿ ಬಿಜ್ಜಳ್ಳಿ ನಂದೀಶ್, ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳಾದ ಹರೀಶ್ ಆರಾಧ್ಯ, ನಂಜುಂಡೇಶ್, ಮನೋಹರ ಅಬ್ಬಿಗೆರೆ, ಭಾರತಿ ಪ್ರಕಾಶ್ ಮುದ್ದೇನಹಳ್ಳಿ, ಕಲ್ಪನಾ ಶೈಲೇಂದ್ರ ಬಾಬ್ಜಿ ಮತ್ತಿತರರು ಉಪಸ್ಥಿತರಿದ್ದರು.

"ಸಮಾಜ ಬಾಂಧವರು ತಮ್ಮ ಉಪಜಾತಿಗಳು ಏನೇ ಇದ್ದರೂ ಮುಂಬರುವ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಬೇಕು. ಇನ್ನುಳಿದ ಯಾವುದೇ ಸಮಾಜದವರಿಗೂ ತೊಂದರೆ ಕೊಡದೆ ಕಾಯಕ ನಿಷ್ಠೆಯನ್ನು ಮೈಗೂಡಿಸಿಕೊಂಡು ಹೋಗುವ ಸಹಿಷ್ಣುತಾ ಸಮಾಜ ವೀರಶೈವ ಸಮಾಜ. ಈ ಸಮಾಜದ ಏಳಿಗೆಗೆ ಪಂಚಪೀಠಾಧೀಶ್ವರರು, ಇನ್ನಿತರ ಹರಗುರು ಚರಮೂರ್ತಿಗಳು ಸುದೀರ್ಘ ಕಾಲದಿಂದ ಶ್ರಮಿಸುತ್ತಿದ್ದಾರೆ." -ವಿ.ಸೋಮಣ್ಣ, ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net