

ತುಮಕೂರು: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತ ಕ್ರಮವಹಿಸಲು ಮಹಾನಗರ ಪಾಲಿಕೆ ನೀರಿನ ನಿರ್ವಹಣೆಗೆ ಒತ್ತು ಕೊಟ್ಟಿದೆ.
ಮೇಯರ್ ಎಂ.ಪ್ರಭಾವತಿ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಕುಡಿಯುವ ನೀರಿನ ನಿರ್ವಹಣೆ ಕುರಿತ ತುರ್ತುಸಭೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬುಗಡನಹಳ್ಳಿ ಜಲಸಂಗ್ರಹಾಗಾರದಿಂದ ನಗರಕ್ಕೆ ಏಪ್ರಿಲ್‌ವರೆಗೆ ನೀರು ಪೂರೈಸಬಹುದಾಗಿದೆ ಎಂಬ ಅಂಶವನ್ನು ಅಧಿಕಾರಿಗಳು ಮನದಟ್ಟು ಮಾಡಿಕೊಟ್ಟರು.
190 ಎಂಸಿಎಫ್‌ಟಿ ನೀರು: ನಗರಕ್ಕೆ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಸದ್ಯ 190 ಎಂಸಿಎಫ್‌ಟಿಯಷ್ಟು ನೀರಿದ್ದು ಇದೇ ಪ್ರಮಾಣದಲ್ಲಿ 4-5 ದಿನಕ್ಕೊಮ್ಮೆ ಮನೆಗಳಿಗೆ ನೀರು ಹರಿಸಿದ್ದೇ ಆದಲ್ಲಿ ಏಪ್ರಿಲ್‌ವರೆಗೆ ನೀರಿನ ಅಭಾವ ಸೃಷ್ಟಿಯಾಗದಂತೆ ಕ್ರಮವಹಿಸಬಹುದೆಂಬ ಮಾಹಿತಿಯನ್ನು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸಭೆಗೆ ಮಾಹಿತಿ ನೀಡಿದರು.
316 ಎಂಸಿಎಫ್‌ಟಿ ಸಾಮರ್ಥ್ಯದ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಜೂನ್‌ನಿಂದ ಅಕ್ಟೋಬರ್ ವರೆಗೆ 520 ಎಂಸಿಎಫ್‌ಟಿ ಹೇಮೆ ನೀರು ಪೂರೈಸಿದ್ದು ಆ ನಂತರ ನಾಲೆ ನೀರು ಸ್ಥಗಿತಗೊಂಡಿತ್ತು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡದಂತೆ ಎಚ್ಚರಿಕೆವಹಿಸಲು ಗೊರೂರು ಡ್ಯಾಂನಿಂದ ಫೆಬ್ರವರಿಗೆ ನೀರು ಬಿಡುವಂತೆ ಹೇಮಾವತಿ ನಾಲಾ ವಲಯದ ನೀರಾವರಿ ಸಲಹಾ ಸಮಿತಿ (ಐಸಿಸಿ) ಗಮನಸೆಳೆಯಬೇಕಿದೆ. ಹಾಗಾಗಿ, ಐಸಿಸಿ ಅಧ್ಯಕ್ಷರು ಆಗಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣಗೆ ಜನಪ್ರತಿನಿಧಿಗಳೆಲ್ಲರೂ ಒಟ್ಟಿಗೆ ಮನವಿ ಮಾಡಿಕೊಳ್ಳಬೇಕಿದೆ ಎಂದರು.
ಕೆರೆಕಟ್ಟೆಗಳಿಗೆ ಯುಜಿಡಿ ನೀರು: ಶೆಟ್ಟಿಹಳ್ಳಿ ಕೆರೆ, ಬಡ್ಡಿಹಳ್ಳಿ ಕೆರೆ, ಗಾರೆನರಸಯ್ಯನ ಕಟ್ಟೆಗೆ ಯುಜಿಡಿ ನೀರು ಮಿಶ್ರಣವಾಗುತ್ತಿದ್ದು ಇದರಿಂದ ವಾಯುವಿಹಾರಿಗಳ ಜತೆಗೆ ಪಕ್ಷಿ, ಜಾನುವಾರುಗಳಿಗೆ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದು ಯುಜಿಡಿ ನೀರು ಹರಿಯದಂತೆ ಕ್ರಮವಹಿಸಬೇಕು ಎಂದು ವಿಪಕ್ಷ ನಾಯಕ ವಿಷ್ಣುವರ್ಧನ್ ಒತ್ತಾಯಿಸಿದರು.
ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಎಚ್ಡಿಕೆ ಮಂಜುನಾಥ್, ಎಚ್.ಮಲ್ಲಿಕಾರ್ಜುನಯ್ಯ, ಜೆ.ಕುಮಾರ್, ಫರೀದಾಬೇಗಂ, ವೀಣಾ, ರೂಪಶ್ರೀ, ದೀಪಶ್ರೀ, ನಳಿನಾ ಮತ್ತಿತರರು ಹಾಜರಿದ್ದರು.
50 ಕೋಟಿ ಅನುದಾನ ಕೆಲವು ವಾರ್ಡ್‌ಗಳಲ್ಲಿ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿಗೆ ಕೆಯುಐಡಿಎಫ್‌ಸಿಯಿಂದ 50 ಕೋಟಿ ರೂಪಾಯಿ ಅನುದಾನ ಬಂದಿದ್ದು ನಗರದಲ್ಲಿ ಮಿಸ್ಸಿಂಗ್ ಲಿಂಕ್ಸ್ ಜತೆಗೆ ಯುಜಿಡಿ ಕಾಮಗಾರಿ ನಡೆಯಬೇಕಿರುವ ಕಡೆ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಆಯುಕ್ತೆ ಅಶ್ವಿಜ ಭರವಸೆಯಿತ್ತರು. 24/7 ಕುಡಿಯುವ ನೀರಿನ ಯೋಜನೆ ಫ್ಲಾಪ್ ನಗರದ ಕೆಲವು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ತಂದಿರುವ ಅಂದಾಜು 200 ಕೋ.ರೂ., ಮೊತ್ತದ 24/7 ಕುಡಿಯುವ ನೀರಿನ ಯೋಜನೆ ಸಂರ್ಪೂಣ ವಿಫಲವಾಗಿದೆ. ಈ ಯೋಜನೆ ಅನುಷ್ಠಾನಗೊಂಡು 4 ವರ್ಷವಾಗಿದ್ದು ನಲ್ಲಿಗಳು ತುಕ್ಕುಹಿಡಿಯುತ್ತಿವೆ. ಇನ್ನೂ ಪರೀಕ್ಷಾರ್ಥವಾಗಿಯು ನೀರು ಬಿಟ್ಟಿಲ್ಲ ಎಂದು ವಿಪಕ್ಷ ನಾಯಕ ವಿಷ್ಣುವರ್ಧನ್ ಸಭೆಯಲ್ಲಿ ಅಸಮಾಧಾನ ಹೊರಹಾಕಿದರು. ಈ ಬಗ್ಗೆ ಸಭೆಯಲ್ಲಿ ಯಾವೊಬ್ಬ ಅಧಿಕಾರಿಗಳು ಮಾತನಾಡದೆ ಮೌನವಹಿಸಿದರು.
803 ಬೋರ್‌ವೆಲ್‌ಗಳು ನಗರ ವ್ಯಾಪ್ತಿಯಲ್ಲಿ 803 ಕೊಳವೆಬಾವಿಗಳು ಚಾಲ್ತಿಯಲ್ಲಿದ್ದು 5 ಎಂಎಲ್‌ಡಿಯಷ್ಟು ನೀರು ಪ್ರತಿನಿತ್ಯ ಸರಬರಾಜಾಗುತ್ತಿದೆ. 44 ಎಂಎಲ್‌ಡಿಯಷ್ಟು ನೀರನ್ನು ಮಾತ್ರ ಬುಗಡನಹಳ್ಳಿ ಜಲಸಂಗ್ರಹಾಗಾರದಿಂದ ಪೂರೈಸಲಾಗುತ್ತಿದ್ದು ವಾರಕ್ಕೆ 4-5ದಿನಕ್ಕೊಮ್ಮೆ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರಿನ ರೇಷನೈಸ್ ಮಾಡಿದ್ದೇ ಆದಲ್ಲಿ ಏಪ್ರಿಲ್‌ವರೆಗೆ ನೀರಿನ ಅಭಾವ ತಲೆದೋರದಂತೆ ಕ್ರಮಹಿಸಬಹುದೆಂದು ಪಾಲಿಕೆ ಇಇ ಬಿ.ಜಿ.ವಿನಯಕುಮಾರ್ ಮಾಹಿತಿ ನೀಡಿದರು.