ಪೊಲೀಸರ ಕಾರ್ಯವೈಖರಿಗೆ ಆಕ್ಷೇಪ : ಉಪ್ಪಿನಂಗಡಿ ಗ್ರಾಮಸಭೆಯಲ್ಲಿ ಪಂಚಾಯಿತಿ ಸದಸ್ಯರಿಂದ ಪ್ರಶ್ನೆಗಳ ಸುರಿಮಳೆ

Published on

ಉಪ್ಪಿನಂಗಡಿ: ದಂಡ ವಿಧಿಸಿ ಸರ್ಕಾರಕ್ಕೆ ಆದಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ಅಲ್ಲಲ್ಲಿ ತಡೆದು ನಿಲ್ಲಿಸಿ ಸಣ್ಣಪುಟ್ಟ ಪ್ರಮಾದಕ್ಕೆ ದಂಡ ವಿಧಿಸುತ್ತಾರೆ. ಆದರೆ ದಾಖಲೆಗಳೇ ಇಲ್ಲದೆ ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯುವ ಖಾಸಗಿ ಬಸ್‌ಗಳ ಬಗ್ಗೆ ಮೌನವಾಗಿರುವುದೇಕೆ ? ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೀತಾ ಶೇಖರ ಲೆಕ್ಕಪತ್ರ ಮಂಡಿಸಿ ವರದಿಗೆ ಮಂಜೂರು ಪಡೆದರು.

ಹಿರಿಯ ಸದಸ್ಯ ಸುರೇಶ ಅತ್ತಮಜಲು ಮಾತನಾಡಿ, ಪುತ್ತೂರು ಸಂಚಾರಿ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನಾ ಪಂಚಾಯಿತಿ ಆಡಳಿತದಿಂದ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ವಾಹನಗಳನ್ನು ತಡೆಹಿಡಿದು ದಂಡ ವಿಧಿಸಲು ತೋರುವ ಆಸಕ್ತಿಯನ್ನು ಟ್ರಾಫಿಕ್ ಜಾಮ್ ಸರಿಪಡಿಸಲು ತೋರುವುದಿಲ್ಲ. ದ್ವಿಚಕ್ರ ವಾಹನ ಮತ್ತು ಸಣ್ಣ ವಾಹನ ಹೊಂದಿರುವವರನ್ನು ಕಳ್ಳರಂತೆ ಬೀದಿ ಬೀದಿಯಲ್ಲಿ ತಡೆದು ನಿಲ್ಲಿಸುವುದು ಸರಿಯೇ ? ಎಂದರು.

ತ್ಯಾಜ್ಯ ಸಂಗ್ರಹಣೆಗೆ ಸಣ್ಣ ವಾಹನದ ಅವಶ್ಯಕತೆ ಇದ್ದು, ಎರಡು ತಿಂಗಳ ಹಿಂದೆಯೇ ನಿರ್ಣಯಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆಗೆ ಕಳುಹಿಸಿದರೂ ಈ ತನಕ ಸ್ಪಂದನೆ ದೊರಕಿಲ್ಲ. ಹೊಸ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳನ್ನು ದಿನವಿಡೀ ಪಾರ್ಕಿಂಗ್ ಮಾಡಿ ಬಸ್‌ಗಳ ಸಂಚಾರಕ್ಕೆ ತಡೆಯೊಡ್ಡುತ್ತಿರುವ ಬಗ್ಗೆ ಅಗತ್ಯ ಕ್ರಮ ಜರುಗಿಸಬೇಕು ಎಂಬಿತ್ಯಾದಿ ವಿಚಾರ ಪ್ರಸ್ತಾಪಿಸಲ್ಪಟ್ಟಿತ್ತು.

ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಮಹಮ್ಮದ್ ತೌಸಿಫ್ ಯು.ಟಿ, ವಿನಾಯಕ ಪೈ, ಉಷಾ ಮುಳಿಯ, ಶೋಭಾ, ಜಯಂತಿ ರಂಗಾಜೆ, ಯು.ಕೆ.ಇಬ್ರಾಹಿಂ, ಅಬ್ದುಲ್ ರಶೀದ್, ರುಕ್ಮಿಣಿ, ವನಿತಾ, ನೆಬಿಸಾ, ಲೋಕೇಶ್, ಧನಂಜಯ ನಟ್ಟಿಬೈಲು ಉಪಸ್ಧಿತರಿದ್ದರು. ಗುಮಾಸ್ತೆ ಜ್ಯೋತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net