ಸೂರ್ಯನನ್ನು ಆರಾಧಿಸುವ ದಿನ : ರಾಜಶೇಖರ ಹಳ್ಳಿಮನೆ ಅಭಿಮತ

5
Published on

ಬೆಳ್ತಂಗಡಿ: ಸೂರ್ಯನು ತನ್ನನ್ನು ತಾನು ಅವಲೋಕನ ಮಾಡಿಕೊಳ್ಳುವ ಕಾಲವಿದು. ಸೂರ್ಯ ಯಾರಿಗೂ ಮೋಸ ಮಾಡುವುದಿಲ್ಲ ಎಲ್ಲರಿಗೂ ಒಂದೇ ರೀತಿಯ ಶಾಖ ಕೊಡುತ್ತಾನೆ. ಈ ಕಾರಣಕ್ಕೆ ಜಗತ್ತಿನ ವಿಜ್ಞಾನಿಗಳು ಸೂರ್ಯನಿಗೆ ಕೈ ಮುಗಿಯುತ್ತಾರೆ. ಮನುಷ್ಯನು ಕೂಡ ಈ ಸಮಯದಲ್ಲಿ ಅವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಸಂಕ್ರಮಣ ಎಂದರೆ ಬದಲಾವಣೆ ಕಾಲ. ದಕ್ಷಿಣಾಯಣದಿಂದ ಉತ್ತರಾಯಣ ಕಾಲದಲ್ಲಿ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾನೆ. ಈ ಪ್ರಕಾಶವನ್ನು ನೀರು ಹೀರಿಕೊಳ್ಳುತ್ತದೆ. ಆದ್ದರಿಂದ ಈ ದಿನ ಸಮುದ್ರ, ಹೊಳೆಗಳಿಗೆ ತೆರಳಿ ಸ್ನಾನ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಎಳ್ಳಿನ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುತ್ತವೆ ಎಂದು ಎಸ್‌ಡಿಎಂ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ರಾಜಶೇಖರ ಹಳ್ಳಿ ಮನೆ ಹೇಳಿದರು.

ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.

ರತ್ನಮಾನಸದ ನಿಲಯ ಪಾಲಕ ಯತೀಶ್ ಕೆ.ಬಳಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಕ್ರಾಂತಿಯ ವಿಶೇಷತೆ ತಿಳಿಸಿದರು. ರತ್ನ ಮಾನಸ ಸಿಬ್ಬಂದಿ ರವಿಚಂದ್ರ, ಉದಯಾರಾಜ್, ದೀಪಕ್ ಉಪಸ್ಥಿತರಿದ್ದರು. ಯಶವಂತ ಸ್ವಾಗತಿಸಿದರು, ನಿಶಿತ್ ವಂದಿಸಿದರು. ಸುಮಂತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net