ಉಪ್ಪಿನಬೆಟಗೇರಿ ಪಿಎಚ್​ಸಿ ಹೊರಗೆ ಥಳಕು ಒಳಗೆ ಹುಳುಕು

05 upbr 2B- PHC story
Published on

ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯದ ಭೀತಿ ಎದುರಾಗಿದೆ. ನೋಡಲು ಹೊಸ ಕಟ್ಟಡ ಆದರೆ, ಸಿಬ್ಬಂದಿ ಕೊರತೆ, ಅಸಮರ್ಪಕ ವಿದ್ಯುತ್ ಪೂರೈಕೆ, ಬಾಂಣತಿಯರಿಗೆ ಬಿಸಿ ನೀರಿನ ಕೊರತೆ ಸೇರಿ ಸಾಲು ಸಾಲು ಸಮಸ್ಯೆಗಳು ಈ ಆರೋಗ್ಯ ಕೇಂದ್ರದಲ್ಲಿ ಕಂಡು ಬರುತ್ತಿವೆ.

ಇದು ಉಪ್ಪಿನಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆಯ ಸ್ಥಿತಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಆಸ್ಪತ್ರೆ ಅನಾರೋಗ್ಯ ಪೀಡಿತವಾಗಿದೆ.

2016-17ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅಂದಾಜು 2.6 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಆಸ್ಪತ್ರೆ ನಿರ್ವಿುಸಲಾಗಿದ್ದು, ನಿರ್ವಹಣೆ ಶೂನ್ಯವಾಗಿದೆ. ‘ಹೊರಗೆ ಥಳಕು ಒಳಗೆ ಹುಳುಕು’ ಎಂಬಂತೆ ಆರೋಗ್ಯ ಕೇಂದ್ರ ಸಾಲು ಸಾಲು ಸಮಸ್ಯೆಗಳಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅಗತ್ಯವಿದೆ.

6 ಗ್ರಾಮ ಪಂಚಾಯಿತಿ ವ್ಯಾಪ್ತಿಯ 19 ಗ್ರಾಮಗಳ ಸುಮಾರು 45 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಉಪ್ಪಿನಬೆಟಗೇರಿ ಆರೋಗ್ಯ ಕೇಂದ್ರದಲ್ಲಿ ಒಬ್ಬರೆ ಆಯುಷ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕಾಯಂ ಆಗಿ ಒಬ್ಬ ಎಂಬಿಬಿಎಸ್ ವೈದ್ಯರು ಸೇವೆ ಸಲ್ಲಿಸುತ್ತಿದ್ದರು. ಅವರು ಬೇರೆ ಕಡೆಗೆ ಹೋದ ಬಳಿಕ ಕಾಯಂ ವೈದ್ಯರೇ ಇಲ್ಲದಂತಾಗಿದೆ.

ಸಧ್ಯಕ್ಕೆ ಎಂಬಿಬಿಎಸ್ ವೈದ್ಯ ಡಾ. ಶಶಿಧರ ಕಳಸೂರಮಠ ಎಂಬುವವರು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದರಿಂದ ರೋಗಿಗಳನ್ನು ಪರೀಕ್ಷಿಸುತ್ತಿಲ್ಲ. ಹೀಗಾಗಿ ಆಯುಷ್ ವೈದ್ಯರಿಗೆ ಪ್ರತಿ ದಿನ ನೂರಾರು ರೋಗಿಗಳು ತಪಾಸಣೆಗೆ ಮುಗಿ ಬೀಳುತ್ತಿದ್ದಾರೆ.

ಖಾಲಿ ಹುದ್ದೆಗಳು:  ಉಪ್ಪಿನಬೆಟಗೇರಿಯ 3 ಉಪ ಕೇಂದ್ರಗಳು, ಕಬ್ಬೇನೂರ, ಯಾದವಾಡ, ಕೊಟಬಾಗಿ, ಕುರುಬಗಟ್ಟಿ, ಲೋಕೂರ, ಸೇರಿ ಒಟ್ಟು 8 ಉಪಕೇಂದ್ರಗಳು ಇವೆ. ಇವುಗಳ ಪೈಕಿ ಉಪ್ಪಿನಬೆಟಗೇರಿ ಸಿ ಭಾಗ ಹಾಗೂ ಕೊಟಬಾಗಿ ಉಪ ಕೇಂದ್ರಗಳಲ್ಲಿ ಸಿಬ್ಬಂದಿಗಳಿಲ್ಲ. ಒಟ್ಟು ಇಲ್ಲಿ 1 ಎಂಬಿಬಿಎಸ್ ಹುದ್ದೆ, 3 ಪುರುಷ ಪಿಎಚ್​ಐಒ ಹಾಗೂ ಮಹಿಳಾ ಪಿಎಚ್​ಸಿಒ ಹುದ್ದೆಗಳು 2 ಸೇರಿ ಒಟ್ಟು 6 ಪ್ರಮುಖ ಹುದ್ದೆಗಳು ಖಾಲಿ ಇವೆ. ರೋಗಿಗಳು ಆಸ್ಪತ್ರೆಗೆ ಹೋದರೆ ಸಿಬ್ಬಂದಿಯೇ ಇರುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

 ಬೆಳಕಿನ ಕೊರತೆ:  ಗಾಳಿ- ಮಳೆಯಿಂದ ವಿದ್ಯುತ್ ಸ್ಥಗಿತವಾದಾಗ ಆಸ್ಪತ್ರೆಯಲ್ಲಿ ಬೆಳಕಿನ ಕೊರತೆ ಎದ್ದು ಕಾಣುತ್ತದೆ. ಇಲ್ಲಿರುವ ಇರ್ನÌರ್, ಸೋಲಾರ ವಿದ್ಯುತ್ ಘಟಕ, ಸೋಲಾರ್ ಬಿಸಿ ನೀರಿನ ಘಟಕ ನಿರುಪಯುಕ್ತವಾಗಿವೆ. ಬಾಣಂತಿಯರಿಗೆ ಕೊಡದಲ್ಲಿ ಕ್ವಾಯಿಲ್ ಇಟ್ಟು ನೀರು ಕಾಯಿಸಿ ನೀಡಲಾಗುತ್ತಿತ್ತು. ಕೆಲ ದಿನಗಳಿಂದ ಅದು ಹಾಳಾಗಿದ್ದು, ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಯಾಗಳು ತಮ್ಮ ಮನೆಯಿಂದ ನೀರು ಕಾಯಿಸಿ ಪೂರೈಕೆ ಮಾಡುತ್ತಿದ್ದಾರೆ ಎಂದು ರೋಗಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ತುರ್ತು ಚಿಕಿತ್ಸೆಗೆಂದು ಬೇರೆ ಕಡೆಗೆ ಹೋಗಲು ಆಸ್ಪತ್ರೆಯಲ್ಲಿ 108 ಆಂಬುಲೆನ್ಸ್ ಸೇವೆಯೂ ಇಲ್ಲದಂತಾಗಿದೆ.

ಸಾವಿರಾರು ಜನರ ಆರೋಗ್ಯ ಕಾಪಾಡಬೇಕಿದ್ದ ಆರೋಗ್ಯ ಕೇಂದ್ರವೇ ಅನಾರೋಗ್ಯದಿಂದ ಬಳಲುತ್ತಿದೆ. ಜನಸಾಮಾನ್ಯರಿಗೆ ಸೂಕ್ತ ಸೇವೆ ಲಭಿಸುತ್ತಿಲ್ಲ. ಎಂಬಿಬಿಎಸ್ ವೈದ್ಯ ಶಶಿಧರ ಕಳಸೂರಮಠ ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಹೆಸರಿಗೆ ಮಾತ್ರ ವೈದ್ಯರಾಗಿದ್ದಾರೆ. ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ರೋಗಿಗಳು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. | ಬಸೀರ ಅಹ್ಮದ ಮಾಳಗಿಮನಿ ಗ್ರಾಪಂ ಅಧ್ಯಕ್ಷ ಉಪ್ಪಿನಬೆಟಗೇರಿ ಉಪ್ಪಿನಬೆಟಗೇರಿ ಆರೋಗ್ಯ ಕೆಂದ್ರದಲ್ಲಿ ಎಂಬಿಬಿಎಸ್ ವೈದ್ಯ ಸೇರಿ ಕೆಲವು ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿಗೆ ಪ್ರಯತ್ನಿಸಲಾಗುತ್ತಿದ್ದು, ಆದಷ್ಟು ಬೇಗನೆ ವೈದ್ಯರ ನೇಮಕವಾಗಲಿದೆ. ಆಸ್ಪತ್ರೆ ಉಸ್ತುವಾರಿಗೆಂದು ನೇಮಕ ಮಾಡಿದ ಶಶಿಧರ ಕಳಸೂರಮಠ ಜತೆಗೆ ನೋಡಲ್ ಅಧಿಕಾರಿಯನ್ನು ಕಳಿಸಿ ಅಲ್ಲಿರುವ ಸಮಸ್ಯೆ ಸರಿಪಡಿಸಲು ತಿಳಿಸುತ್ತೇನೆ | ಡಾ.ಎಸ್.ಎಂ. ಹೊನಕೇರಿ ಡಿಎಚ್​ಒ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net