ಉಪ್ಪಾರಪೇಟೆ ಬೆಟ್ಟಕ್ಕೆ ವ್ಯಾಪಿಸಿದ ಬೆಂಕಿ

web 1
Published on

ಪ್ರಯಾಣಿಕರೊಬ್ಬರು ನೀಡಿದ ಮಾಹಿತಿ ಅರಣ್ಯ ಇಲಾಖೆಯಿಂದ ನಂದಿಸುವ ಕಾರ್ಯ

ಚಿಂತಾಮಣಿ: ಅಂಬಾಜಿದುರ್ಗ ಬೆಟ್ಟ ಅತ್ಯಂತ ವಿಶಾಲವಾಗಿದ್ದು, ನಿರಂತರವಾಗಿ ಬೆಂಕಿ ಬೀಳುತ್ತಿದ್ದು, ಒಂದೊಂದೇ ಭಾಗ ನಾಶವಾಗುತ್ತಿದೆ. ಇದೀಗ ತಾಜಾ ಉದಾಹರಣೆ ಎಂಬಂತೆ ಬುಧವಾರ ರಾತ್ರಿ ಉಪ್ಪಾರಪೇಟೆ ಬೆಟ್ಟಕ್ಕೆ ಬೆಂಕಿ ಬಿದ್ದು, ಇಡೀ ಬೆಟ್ಟವನ್ನು ವ್ಯಾಪಿಸುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಂತಿಲ್ಲ.

ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ಬುಧವಾರ ಕಾರಿಯಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರು ಬೆಟ್ಟಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಮಾಧ್ಯಮದವರ ಗಮನಕ್ಕೆ ತಂದರು. ಕೂಡಲೇ ಮಾಧ್ಯಮದವರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರಿಯೇ ಬೆಟ್ಟಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬೆಂಕಿಗೆ ಕಾರಣವೇನು?

ಬಹುತೇಕ ಗ್ರಾಮಗಳ ಅಂಚಿನಲ್ಲಿರುವ ಬೆಟ್ಟಗಳಿಗೆ ಬೆಂಕಿ ಬೀಳಲು ಹಲವು ಕಾರಣಗಳಿವೆ. ಕುರಿ ಮತ್ತು ಮೇಕೆ ಜಾನುವಾರುಗಳಿಗಾಗಿ ಬೆಟ್ಟದಲ್ಲಿರುವ ಹುಲ್ಲು ಹೊಸದಾಗಿ ಚಿಗುರಲಿ ಎಂಬುದು, ಮತ್ತೊಂದು ಪುಂಡ ಪೋಕರಿಗಳು ಹುಚ್ಚಾಟಕ್ಕೆ ಬೆಂಕಿ ಹಚ್ಚುವುದು ನಡೆಯುತ್ತದೆ. ಕಾಡಿಗೆ ಬೆಂಕಿ ಬೀಳುತ್ತಿರುವ ಬಗ್ಗೆ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಗಳಿಂದ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುತ್ತಿದ್ದರೂ ಬೆಟ್ಟಗಳಿಗೆ ಬೆಂಕಿ ಬೀಳುತ್ತಿರುವ ಘಟನೆಗಳು ಸಂಭವಿಸುತ್ತಲೇ ಇದೆ.ಆಗಿಂದಾಗ್ಗೆ ನಡೆಯುತ್ತಲೇ ಇವೆ. ಜನ, ಅಧಿಕಾರಿಗಳ ನಿರ್ಲಕ್ಷ್ಯ, ಕಿಡಿಗೇಡಿಗಳ ಹುಚ್ಚಾಟವೂ ಬೆಂಕಿ ಅವಘಡಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಬೆಂಕಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿತಾಗ ಮಾತ್ರ ಇಂಥ ಅವಘಡ ತಪ್ಪಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net