ದೇಶದ ಅಭಿವೃದ್ಧಿಗೆ ಅಸ್ಪೃಶ್ಯತೆ ಮಾರಕ

FotoJet
Published on

 ತಹಸೀಲ್ದಾರ್ ಮಂಜುನಾಥ್ ಕಲವಳ | ಬೀದಿ ನಾಟಕ ಮೂಲಕ ಜಾಗೃತಿ

ಕನಕಪುರ : ದೇಶದಲ್ಲಿ ಅಸ್ಪೃಶ್ಯತೆ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು ದೇಶದ ಅಭಿವೃದ್ಧಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಕಸಬಾ ಹೋಬಳಿಯ ಕೂನೂರು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿವಾರಣೆ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿರುವ ಅಸ್ಪೃಶ್ಯತೆ ಜಾತಿ ವ್ಯವಸ್ಥೆಯಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವುದು ಕಾನೂನು ಬಾಹಿರ. ಪ್ರತಿಯೊಬ್ಬರೂ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ನಾವೆಲ್ಲರೂ ಸಹಬಾಳ್ವೆಯಿಂದ ಜೀವನ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ಅಸ್ಪೃಶ್ಯತೆ ಆಚರಣೆಗೆ ಹಲವು ಮುಖಗಳಿವೆ. ಕೆಲವರು ಜಾತಿ ನಿಂದನೆ, ಊರಿನಿಂದಲೇ ಬಹಿಷ್ಕಾರ, ಸಾರ್ವಜನಿಕ ದಾರಿಗಳಲ್ಲಿ ಓಡಾಡಲು ಬಿಡದಿರುವುದು, ಸಾರ್ವಜನಿಕ ದೇವಾಲಯಗಳಿಗೆ ಪ್ರವೇಶ ನಿಬರ್ಂಧಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ದಲಿತರ ಪ್ರವೇಶ ನಿಷೇಧಿಸುವುದು. ಇವೆಲ್ಲವೂ ಆಚರಣೆ ಮುಖಗಳು. ಇದನ್ನು ಆಚರಿಸುವವರು ಕಠಿಣ ಶಿಕ್ಷೆಗೆ ಒಳಗಾಗ ಬೇಕಾಗುತ್ತದೆ. ಮಾನವೀಯತೆ, ಅನುಕಂಪದಲ್ಲಿ ಮನುಷ್ಯರೆಲ್ಲರೂ ಜೀವಿಸಬೇಕು ಎಂದರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಅಸ್ಪೃಶ್ಯತೆ ದೇಶಕ್ಕೆ ಅಂಟಿರುವ ದೊಡ್ಡ ಶಾಪವಾಗಿದೆ. ವಿದ್ಯಾರ್ಥಿ, ಯುವ ಸಮೂಹ, ಸಾರ್ವಜನಿಕರೆಲ್ಲರೂ ಸೇರಿ ತಮ್ಮ ಹೋಣೆಗಾರಿಕೆಯನ್ನು ನಿಭಾಯಿಸಬೇಕು, ಇದರ ನಿವಾರಣೆಯಲ್ಲಿ ತನ್ನ ಪಾತ್ರ ಏನು ಎಂಬುದನ್ನು ಮನಗಾಣಬೇಕು. ಆಗ ಮಾತ್ರವೇ ದೇಶಕ್ಕೆ ಭವಿಷ್ಯವಿರುತ್ತದೆ ಎಂದು ಸಲಹೆ ನೀಡಿದರು.

ಮುತ್ತುರಾಜು ಮತ್ತು ತಂಡದವರು ಬೀದಿ ನಾಟಕದ ಮೂಲಕ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಜಾಗೃತಿ ಮೂಡಿಸಿದರು.

ಗ್ರಾಮಾಂತರ ಠಾಣೆ ಉಪನಿರೀಕ್ಷಕ ಮನೋಹರ್, ಅಪರಾಧ ವಿಭಾಗದ ಪಿ.ಎಸ್.ಐ ರುದ್ರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ್, ಉಪ ತಹಸೀಲ್ದಾರ್ ಪ್ರವೀಣ್, ಮುಖಂಡರಾದ ರಾಮು, ಶ್ರೀನಿವಾಸ್, ಮುನಿಯಪ್ಪ ಸೇರಿ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net