ರೈತರಲ್ಲಿ ಆತಂಕ ತಂದ ಅಕಾಲಿಕ ಮಳೆ

Mango tree
Published on

* ಕಾಯಿ ಕಚ್ಚದ ಹೂವು ಕೊಳೆಯುವ ಸಾಧ್ಯತೆ

* ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಲ್ಲಿ ನಷ್ಟ ಭೀತಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ವಾತಾವರಣದಲ್ಲಿನ ದಿಢೀರ್ ಏರುಪೇರು ಮಾವು ಬೆಳೆಗಾರರ ಆತಂಕ ಹೆಚ್ಚಿಸಿದೆ. ಕಳೆದ ಹಲವು ವರ್ಷಗಳಿಂದಲೂ ಒಂದಿಲ್ಲೊಂದು ಕಾರಣಕ್ಕೆ ನಷ್ಟಕ್ಕೆ ಒಳಗಾಗುತ್ತಿರುವ ಜಿಲ್ಲೆಯ ಮಾವು ಬೆಳೆಗಾರರು, ಈ ಬಾರಿ ಉತ್ತಮ ಸಲಿನ ನಿರೀಕ್ಷೆಯಲ್ಲಿ ಇದ್ದಾರೆ. ಇತ್ತೀಚಿಗೆ ಬಿದ್ದ ಮಳೆ ನಷ್ಟದ ಭೀತಿ ಸೃಷ್ಟಿಸಿದೆ. ರಾಮನಗರ ಮಾವು ರಾಜ್ಯದ ಮಾರುಕಟ್ಟೆಗೆ ಮೊದಲು ಪ್ರವೇಶ ಪಡೆಯುತ್ತದೆ. ಆದರೆ, ಈಗ ಆಗುತ್ತಿರುವ ಹವಾಮಾನ ವೈಪರೀತ್ಯ ಎಲ್ಲವನ್ನೂ ಉಲ್ಟಾ ಮಾಡುವ ಸಾಧ್ಯತೆಯೂ ಇದೆ.

ಕೈ ಕೊಟ್ಟ ವಾತಾವರಣ:

ಎರಡು ಬಾರಿ ಕರೊನಾದಿಂದಾಗಿ ಮಾವು ಬೆಳೆಗಾರರು ನಷ್ಟ ಅನುಭವಿಸಿದ್ದರು. ಕಳೆದ ಬಾರಿ ಅತಿಯಾದ ಬಿಸಿಲಿನ ಪರಿಣಾಮ ಕಾಯಿಗಳು ನೆಲ ಕಚ್ಚಿದ್ದವು. ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಹೂವು ಬಿಟ್ಟು ಕಾಯಿಯೂ ಕಚ್ಚುತ್ತಿವೆ.

ಕಳೆದ ಡಿಸೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆ, ಅತಿಯಾದ ಚಳಿ ಹಾಗೂ ‘ಾನುವಾರ ಸುರಿದ ದಿಢೀರ್ ಮಳೆ ಹಾಗೂ ಮೋಡ ಕವಿದ ವಾತಾವರಣ, ಉತ್ತಮ ಬೆಳೆಯ ನಿರೀಕ್ಷೆಯನ್ನು ಹುಸಿಯಾಗಿಸುವ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆ ಮತ್ತು ಮೋಡ ಕವಿದ ವಾತಾವರಣ ಹೀಗೆ ಮುಂದುವರಿದರೆ ಹರಳಿನ ಹಂತದಲ್ಲಿರುವ ಮಾವಿನ ಕಾಯಿ ಕೊಳೆತು ಹೋಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ರೈತರು.

ಪದೇಪದೆ ನಷ್ಟ :

ರಾಮನಗರ ಜಿಲ್ಲೆ ತೋಟಗಾರಿಕೆ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್‌ಗಳಷ್ಟು ಇಳುವರಿ ಇದೆ. ವಾರ್ಷಿಕವಾಗಿ ಸುಮಾರು 400 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಆದರೆ, ಕಳೆದ ಹಲವು ವರ್ಷಗಳಿಂದಲೂ ಪ್ರಕೃತಿಯ ಕಣ್ಣಾ ಮುಚ್ಚಾಲೆ ಆಟಕ್ಕೆ ರೈತರು ಬಲಿಯಾಗುತ್ತಿದ್ದಾರೆ.

ಕಾಯಿ ಉದುರುವ ಆತಂಕ

ವಾತಾವರಣದಲ್ಲಿ ಆಗುತ್ತಿರುವ ಏರುಪೇರಿನಿಂದಾಗಿ ಹರಳಿನ ರೂಪದಲ್ಲಿರುವ ಮಾವಿನ ಕಾಯಿ ಉದುರುವ ಸಾಧ್ಯತೆ ಹೆಚ್ಚಿದೆ. ಮಳೆ ಮಾವಿನ ಬೆಳವಣಿಗೆಗೆ ಪೂರಕವಾಗಿದೆಯಾದರೂ ಮೋಡ ಕವಿದ ವಾತಾವರಣ ಕಾಯಿ ಉದುರುವಂತೆ ಮಾಡುತ್ತದೆ. ಹೆಬ್ಬೆರಳು ಗಾತ್ರದ ಕಾಯಿ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಸಣ್ಣ ಗಾತ್ರದ ಕಾಯಿಗಳು ಹಾಗೂ ಇನ್ನೂ ಕಾಯಿ ಕಚ್ಚುತ್ತಿರುವ ಹೂವು ಬೇಗ ಕೊಳೆಯುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ರೈತರು ಮಾವು ಸಲು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ವಿವಿಧ ಹಂತದಲ್ಲಿ ಔಷಧ ಸಿಂಪಡಣೆ ಮಾಡಿದ್ದಾರೆ. ಇದರ ನಡುವೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಲವಾರು ತಜ್ಞರನ್ನು ಕರೆತಂದು ರೈತರು ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಮಾಹಿತಿ ನೀಡುವ ಕಾರ್ಯ ಮಾಡುವ ಜತೆಗೆ, ಕರ ಪತ್ರಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದೆ.

ತಂಪಾದ ವಾತಾವರಣ ಮತ್ತು ಜಿಟಿಜಿಟಿ ಮಳೆ ಮಾವಿಗೆ ಸಂಚಕಾರ ತಂದಿದೆ. ಇದೇ ಪರಿಸ್ಥಿತಿ ಎರಡು ದಿನ ಮುಂದುವರಿದರೆ ಖಂಡಿತವಾಗಿ ಹರಳಿನ ಗಾತ್ರದ ಕಾಯಿಗಳು ಹಾಗೂ ಇನ್ನೂ ಕಾಯಿ ಕಚ್ಚದ ಹೂವು ಕೊಳೆತು ಹೋಗಲಿವೆ. ಹೆಬ್ಬೆರಳಗಾತ್ರದ ಮಾವು ಉಳಿದುಕೊಳ್ಳುತ್ತದೆ. ಸದ್ಯಕ್ಕೆ ಪ್ರಕೃತಿಯೇ ಮಾವು ಬೆಳೆಗಾರರ ಮೇಲೆ ದಯ ತೋರಬೇಕು. ಇಲ್ಲವಾದರೆ ಈ ಬಾರಿಯೂ ನಮಗೆ ನಷ್ಟ ಕಟ್ಟಿಟ್ಟ ಬುತ್ತಿ. ಸಿದ್ದರಾಜುಮಾವು ಬೆಳೆಗಾರರು ಸಂಘದ ಮಾಜಿ ಅಧ್ಯಕ್ಷ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net