

ಹಾವೇರಿ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸೇರಿ ವಿವಿಧ ಸಂಘ, ಸಂಸ್ಥೆಗಳು ಕರೊನಾ ನಿಯಂತ್ರಣದ ಉದ್ದೇಶದಿಂದ ನಗರದಲ್ಲಿ ಮಧ್ಯಾಹ್ನ 2ರ ನಂತರ ಕರೆ ಕೊಟ್ಟಿದ್ದ ಸ್ವಯಂ ಲಾಕ್ಡೌನ್ಗೆ ನಗರದ ವ್ಯಾಪಾರಸ್ಥರಿಂದ ಬೆಂಬಲ ಸಿಗಲಿಲ್ಲ.
ಜು. 14ರಂದು ಸಭೆ ಸೇರಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ವಿವಿಧ ವ್ಯಾಪಾರಿ ಹಾಗೂ ಆಟೋ, ಟೆಂಪೋ, ಮದ್ಯ ಮಾರಾಟಗಾರ ಸಂಘಟನೆಯವರನ್ನು ಜು. 15ರಿಂದ ನಗರದಲ್ಲಿ ಮಧ್ಯಾಹ್ನ 2ರ ನಂತರ ಸ್ವಯಂ ಆಗಿ ಲಾಕ್ಡೌನ್ ಮಾಡಿಕೊಳ್ಳಲು ತೀರ್ವನಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಅಲ್ಲದೆ, ಜು. 15ರಂದು ಪೊಲೀಸರು ಹಾಗೂ ತಹಸೀಲ್ದಾರರೊಂದಿಗೆ ಸಭೆ ನಡೆಸಿ ಬೆಂಬಲ ಕೋರಿದ್ದರು. ಮೊದಲ ದಿನ ಜು. 15ರಂದು ಸ್ವಯಂ ಲಾಕ್ಡೌನ್ ಸಭೆಯ ನೆಪದಲ್ಲಿ ವಿಫಲವಾಗಿತ್ತು. ಗುರುವಾರದಿಂದ ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲರೂ ಸೂಚಿಸಿದ್ದರು. ಆದರೆ, ಗುರುವಾರವೂ ಸ್ವಯಂ ಲಾಕ್ಡೌನ್ಗೆ ಬಹುತೇಕ ವ್ಯಾಪಾರಸ್ಥರಿಂದ ಸ್ಪಂದನೆ ದೊರೆಯಲಿಲ್ಲ. ಪೊಲೀಸ್ ಇಲಾಖೆ ಮಧ್ಯಾಹ್ನ 1ಕ್ಕೆ ಧ್ವನಿವರ್ಧಕದ ಮೂಲಕ ಮಧ್ಯಾಹ್ನ 2ರಿಂದ ಸ್ವಯಂ ಲಾಕ್ಡೌನ್ ಪಾಲಿಸುವಂತೆ ನಗರದಲ್ಲಿ ಒಂದು ಸುತ್ತು ಹಾಕಿ ಮಾಹಿತಿ ನೀಡಿದರು. ಆದರೂ ಬಹುತೇಕ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಲಿಲ್ಲ.
ಕರೊನಾ ಮಹಾಮಾರಿಯು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ನಾವೆಲ್ಲರೂ ರ್ಚಚಿಸಿ ಅದರ ನಿಯಂತ್ರಣಕ್ಕೆ ಸ್ವಯಂ ಲಾಕ್ಡೌನ್ ಸೂಕ್ತ ಎಂಬ ಉದ್ದೇಶದಿಂದ ನಿರ್ಣಯ ಕೈಗೊಂಡಿದ್ದೆವು. ಆರಂಭದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲವೂ ಬಂದ್ ಆಗಲು ಸ್ವಲ್ಪ ಕಷ್ಟವಾಗಲಿದೆ. ನಮ್ಮ ಕರೆಗೆ ಕೆಲವರು ಸ್ವಯಂ ಆಗಿ ಬಂದ್ ಮಾಡಿದ್ದಾರೆ. ಇನ್ನು ಕೆಲವರು ಬಂದ್ ಮಾಡಿಲ್ಲ. ನಾವು ಒತ್ತಾಯ ಮಾಡಿ ಬಂದ್ ಮಾಡಿಸಲು ಆಗಲ್ಲ. ಸದ್ಯ ಹಬ್ಬವಿರುವುದರಿಂದ ಸ್ವಲ್ಪ ವ್ಯಾಪಾರ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಸಹಕಾರ ನೀಡುವ ವಿಶ್ವಾಸವಿದೆ.| ಜಿ.ವಿ. ಹಿರೇಗೌಡರ, ಜಂಟಿ ಕಾರ್ಯದರ್ಶಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾವೇರಿ