ಅವೈಜ್ಞಾನಿಕ ಹೇಳಿಕೆ ಹಿಂಪಡೆಯಲು ಪಟ್ಟು

Vatal Nagraj Protest
Published on

* ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಮನಗರದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ರಾಮನಗರ

ಉದ್ಯೋಗಿಗಳ ಕೆಲಸದ ಅವಧಿಯಲ್ಲಿ ಹೆಚ್ಚು ಸಮಯ ದುಡಿಯಬೇಕು ಎಂದು ಹೇಳುತ್ತಿರುವ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣಿಯನ್ ಸ್ವಾಮಿ ಹೇಳಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾಮನಗರದ ಐಜೂರು ಬಸ್ ನಿಲ್ದಾಣದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ವಾರದಲ್ಲಿ ಉದ್ಯೋಗಿಗಳ ಕೆಲಸದ ಅವಧಿ ಈಗಿರುವುದೇ ಹೆಚ್ಚಾಗಿದೆ. ಈಗಾಗಲೇ ಉದ್ಯೋಗಿಗಳು ಕೆಲಸದ ಒತ್ತಡದಲ್ಲಿ ಬೇಯುತ್ತಿದ್ದಾರೆ. ಇಂತಹ ಸಮಯದಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ದುಡಿಯಬೇಕು ಎಂದರೆ ಎಲ್‌ಅಂಡ್ ಟಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣಿಯನ್ ಸ್ವಾಮಿ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕೆಂಬ ಹೇಳಿಕೆ ನೀಡಿ ಉದ್ಯೋಗಿಗಳನ್ನು ಅಗೌರವವಾಗಿ ಕಾಣುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾರದಲ್ಲಿ 70 ರಿಂದ 90 ಗಂಟೆ ಕೆಲಸ ಮಾಡಿದರೆ ಮನುಷ್ಯನ ಆರೋಗ್ಯ, ಅವನ ಮಾನಸಿಕ ಒತ್ತಡದ ಸ್ಥಿತಿ ಏನಾಗಬೇಕು?. ಉದ್ಯೋಗಿಗಳ ಆರೋಗ್ಯ ಅವರಿಗೆ ಮುಖ್ಯವಲ್ಲವೇ? ಈ ರೀತಿ ಕೆಲಸದ ಒತ್ತಡ ಹೇರುವುದು ತರವಲ್ಲ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಕಿಡಿಕಾರಿದರು.

ವಾರದಲ್ಲಿ 48 ಗಂಟೆ ಕೆಲಸ ನಿರ್ಧಾರವಾಗಿದೆ. ಅದೇ ರೀತಿಯಲ್ಲಿ ಮುಂದುವರಿಯಲಿ. ಎರಡು ದಿನ ರಜೆ ಸಿಗಲಿದೆ. ಹೆಂಡತಿ ಮುಖ ನೋಡದೆ ಕೆಲಸಕ್ಕೆ ಬನ್ನಿ ಎಂದರೆ ಹೇಗೆ? ಅವರಿಗೆ ಸಾಮರಸ್ಯ ಬೇಡವೇ? ಇದು ಅವೈಜ್ಞಾನಿಕ ಹೇಳಿಕೆ ಎಂದರು.

ಸಭಾಪತಿ ತೀರ್ಮಾನ ಅಂತಿಮ

ವಿಧಾನ ಮಂಡಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಬಗ್ಗೆ ಮಾಜಿ ಸಚಿವ ಸಿ.ಟಿ.ರವಿ ನೀಡಿದ್ದಾರೆನ್ನಲಾದ ಹೇಳಿಕೆಗೆ ಸಂಬಂಧಿಸಿದಂತೆ ಸರ್ಕಾರ ನಡೆಸಲು ಉದ್ದೇಶಿಸಿರುವ ಸಿಐಡಿ ತನಿಖೆ ಅವಶ್ಯಕತೆ ಇಲ್ಲ. ಈಗಾಗಲೇ ಸಭಾಪತಿ ಹೊರಟ್ಟಿ ಅವರು ಸದನದಲ್ಲಿ ತೀರ್ಪು ನೀಡಿದ್ದಾರೆ. ಅದನ್ನು ಗೌರವಿಸಬೇಕು. ಇದು ಸದನದ ಒಳಗಿನ ವಿಷಯ. ಗೃಹ ಸಚಿವ ಪರಮೇಶ್ವರ್ ಇಬ್ಬರನ್ನು ಕರೆದು ಮಾತನಾಡಿ ಪ್ರಕರಣಕ್ಕೆ ಅಂತ್ಯ ಹಾಡಬೇಕು. ಮುಂದುವರಿಸುವುದು ಬೇಡ. ಸರ್ಕಾರ ಅದನ್ನು ಬಿಟ್ಟು ತನಿಖೆ ನಡೆಸಲು ಮುಂದಾಗಿರುವುದು ಸದನಕ್ಕೆ ಅಗೌರವ ತಂದಂತಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಕರುನಾಡ ಸೇವೆ ಉಪಾಧ್ಯಕ್ಷ ಐಜೂರು ಎಂ. ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್, ತಾಲೂಕು ಅಧ್ಯಕ್ಷ ವಿ.ಎನ್. ಗಂಗಾಧರ್, ಜಿಲ್ಲಾ ದಲಿತ ಘಟಕ ಅಧ್ಯಕ್ಷ ಕೆ. ಜಯರಾಮು, ತಾಲೂಕು ಮಹಿಳಾ ಅಧ್ಯಕ್ಷೆ ಭಾಗ್ಯ ಸುಧಾ, ನಗರ ಘಟಕ ಅಧ್ಯಕ್ಷ ಪ್ರಸನ್ನ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಕೆಂಪರಾಜು, ಶಿವರಾಜು, ಪಾರ್ಥಸಾರಥಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net